ವಾಷಿಂಗ್ಟನ್, ಜ.24 (DaijiworldNews/AA): ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಮೆರಿಕದ ಇತಿಹಾಸದಲ್ಲೇ ಬೃಹತ್ ಗಡಿಪಾರು ಕಾರ್ಯಾಚರಣೆ ನಡೆಸಲಾಗಿದೆ. ಅದರಂತೆ 538 ಅಕ್ರಮ ವಲಸಿಗರನ್ನು ಬಂಧಿಸಲಾಗಿದ್ದು, ನೂರಾರು ಮಂದಿಯನ್ನ ಗಡಿಪಾರು ಮಾಡಲಾಗಿದೆ.

ಈ ಕುರಿತು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೀವಿಟ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಯುಎಸ್ನ ಅಧಿಕಾರಿಗಳು ಸುಮಾರು 538 ಅಕ್ರಮ ವಲಸಿಗರನ್ನು ಬಂಧಿಸಿದ್ದು, ಮಿಲಿಟರಿ ವಿಮಾನಗಳನ್ನು ಬಳಸಿಕೊಂಡು ನೂರಾರು ಮಂದಿಯನ್ನ ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಶಂಕಿತ ಭಯೋತ್ಪಾದಕರು, ಟ್ರೆನ್ ಡಿ ಅರಗುವಾ ಗ್ಯಾಂಗ್ನ ನಾಲ್ವರು ಸದಸ್ಯರು ಹಾಗೂ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಕೃತ್ಯ ಎಸಗಿ ಶಿಕ್ಷೆಗೊಳಾದವರು ಸೇರಿದಂತೆ 538 ಮಂದಿಯನ್ನು ಬಂಧಿಸಲಾಗಿದೆ. ಬಳಿಕ ಮಿಲಿಟರಿ ವಿಮಾನದ ಮೂಲಕ ನೂರಾರು ಮಂದಿಯನ್ನ ಗಡಿಪಾರು ಮಾಡಲಾಗಿದೆ. ಇದು ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಗರಿಪಾರು ಕಾರ್ಯಾಚರಣೆ ಆಗಿದೆ. ಈ ಮೂಲಕ ಅಮೆರಿಕದ ನೂತನ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಪೋಸ್ಟ್ ಮಾಡಿದ್ದಾರೆ.