ಇಸ್ಲಾಮಾಬಾದ್, ಜೂ11(Daijiworld News/SS): ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದಲ್ಲಿರುವ ಸುಮಾರು 13 ಉಗ್ರರ ತರಬೇತಿ ಕೇಂದ್ರಗಳನ್ನು ಪಾಕ್ ಸರ್ಕಾರ ಮುಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಜಾಫರಾಬಾದ್, ಕೋಟ್ಲಿಯಲ್ಲಿ ತಲಾ ಐದು ಮತ್ತು ಬರ್ನಾಲದಲ್ಲಿನ ಮೂರು ಶಿಬಿರಗಳನ್ನು ಬಂದ್ ಮಾಡಲಾಗಿದೆ. ಇವುಗಳನ್ನು ಲಷ್ಕರ್-ಎ-ತೊಯ್ಬ, ಜೈಷ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ನಡೆಸುತ್ತಿದ್ದವು. ಈ ಸಂಘಟನೆಗಳಿಗೆ ಪಾಕ್ ಸೇನೆಯ ಬೆಂಬಲ ಕೂಡ ಇತ್ತು ಎನ್ನಲಾಗಿದೆ.
ಬಾಲಾಕೋಟ್ನಲ್ಲಿದ್ದ ಉಗ್ರರ ಶಿಬಿರವನ್ನು ಭಾರತೀಯ ವಾಯುಪಡೆ ಧ್ವಂಸ ಮಾಡಿದ ಬಳಿಕ ಎಲ್ಒಸಿಯಲ್ಲಿ ಉಗ್ರರ ನುಸುಳುವಿಕೆಗೆ ಕಡಿವಾಣ ಬಿದ್ದಿತ್ತು. ಆದರೆ, ಪಿಒಕೆಯಲ್ಲಿರುವ ಉಗ್ರರ ಲಾಂಚ್ಪ್ಯಾಡ್ಗಳ ಚಲನವಲನ ಮುಂದುವರಿದಿತ್ತು. ಈ ಬಗ್ಗೆ ಭಾರತೀಯ ಸೇನೆ ಮಾಹಿತಿ ಸಂಗ್ರಹಿಸಿರುವುದು ತಿಳಿಯುತ್ತಿದ್ದಂತೆ ಪಾಕ್ ಸರ್ಕಾರ ಅವುಗಳನ್ನು ಮುಚ್ಚಿಸಿದೆ ಎಂದು ತಿಳಿದುಬಂದಿದೆ.
ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತ ದಾಳಿ ನಡೆಸುವ ಭಯ ಮತ್ತು ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯದ ಒತ್ತಡ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.