ದುಬೈ, ಜೂ 07 (Daijiworld News/MSP): ದುಬೈನಲ್ಲಿ ನಡೆದ ಭೀಕರ ಬಸ್ಸು ಅಪಘಾತದಲ್ಲಿ 17 ಮಂದಿ ಸಾವಿಗೀಡಾಗಿದ್ದು , ಇದರಲ್ಲಿ ಎಂಟು ಮಂದಿ ಭಾರತೀಯರು ಎಂದು ತಿಳಿದುಬಂದಿದೆ.
ಗುರುವಾರ ಸಂಜೆ ಒಮಾನ್ನಿಂದ ದುಬೈಗೆ ಬರುತ್ತಿದ್ದ ಒಮಾನ್ ಸರ್ಕಾರದ ಬಸ್ ಶೇಖ್ ಮೊಹಮ್ಮದ್ ಬಿನ್ ಜಾಯದ್ ರಸ್ತೆ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ್ದು, ರಸ್ತೆ ಸೂಚನ ಫಲಕಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
"ಮೃತಪಟ ಕುಟುಂಬದವರನ್ನು ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿಸಿದ್ದು, ಇನ್ನು ಕೆಲವು ಕುಟುಂಬದವರಿಗೆ ಇನ್ನಷ್ಟು ವಿವರ ನೀಡಲು ಮಾಹಿತಿಗಾಗಿ ಕಾಯುತ್ತಿದ್ದೇವೆ " ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.
ಅಪಘಾತದಲ್ಲಿ ಸಾವಿಗೀಡಾದವರು -ರಾಜಗೋಪಾಲನ್, ಫಿರೋಜ್ ಖಾನ್ ಪಠಾಣ್, ರೇಷ್ಮಾ ಫಿರೋಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್,ಕಿರಣ್ ಜಾನಿ, ವಾಸುದೇವ್ ಮತ್ತು ತಿಲಕ್ರಾಮ್ ಜವಾಹರ್ ಠಾಕೂರ್ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.