ಲಂಡನ್, ಜೂ 07 (Daijiworld News/MSP): " ಲಂಡನ್ ನಲ್ಲಿರುವ ಸ್ಪೋಟ್ಸ್ ಬಾರ್ ನಲ್ಲಿ ಕಾಕ್ ಟೇಲ್ ಕುಡಿಯುತ್ತಾ ದಕ್ಷಿಣ ಭಾರತದ ಆಹಾರವನ್ನು ಎಂಜಾಯ್ ಮಾಡಬಹುದು" ಹೀಗೆಂದು ಟ್ವೀಟ್ ಮಾಡಿರೋದು "ಮದ್ಯದ ದೊರೆ" ಎಂಬ ಖ್ಯಾತಿಯ ಸಧ್ಯ "ಸಾಲದ ದೊರೆ"ಯಾಗಿರುವ ವಿಜಯ್ ಮಲ್ಯ.
9 ಸಾವಿರ ಕೋಟಿ ರೂ. ಸಾಲ ಮಾಡಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ಕೋರ್ಟ್ ಕಚೇರಿಗಳ ಅಲೆದಾಟದ ನಡುವೆಯೂ ಲಂಡನ್ ನಲ್ಲಿ ತನ್ನದೇ ಸ್ಟೈಲ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಉದ್ಯಮಿ ವಿಜಯ್ ಮಲ್ಯ .
" ಇಲ್ಲಿನ ಡಾರ್ಸೆಟ್ ಸ್ಟ್ರೀಟ್ ನಲ್ಲಿರುವ "ಊಟಿ ಸ್ಟೇಶನ್ " ನಾಳೆ ಆರಂಭಗೊಳ್ಳಲಿದ್ದು ಇದರ ಪೂರ್ವಭೇಟಿಗೆ ನನಗೆ ಆಹ್ವಾನವಿತ್ತು. "ಊಟಿ ಸ್ಟೇಶನ್ " ಎನ್ನುವ ಸ್ಪೋಟ್ಸ್ ಬಾರ್ ಸುಪರ್ಬ್ ಆಗಿದೆ. ನಾನಿಲ್ಲಿ ಅತ್ಯುತ್ತಮ ದಕ್ಷಿಣ ಭಾರತೀಯ ಆಹಾರ ಆಸ್ವಾಧಿಸಿದ್ದು , ವಿವಿಧ ತೆರನಾದ ಕಾಕ್ಟೈಲ್ ಲಭ್ಯವಿದೆ. ಪ್ರೀಮಿಯಂ ಸ್ಪೋರ್ಟ್ಸ್ ಬಾರ್ ಇದಾಗಿದ್ದು ಪ್ರಶಸ್ತಿ ವಿಜೇತ ಆಹಾರವನ್ನು ಆನಂದಿಸಲು ಲಂಡನ್ನಲ್ಲಿರುವ ಏಕೈಕ ಸ್ಥಳವಾಗಿದೆ " ಎಂದು ಮದ್ಯದ ದೊರೆ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ನೆಟ್ಟಿಗರು ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯೆ ಮಾಡಿದ್ದಾರೆ. ಶ್ರೀಕಾಂತ್ ಎನ್ನುವವರು , ನೀವು ಹೋದ ಸ್ಪೋಟ್ಸ್ ಬಾರ್ ಬಿಲ್ ಪಾವತಿಸಿದ್ದೀರೋ ? ಅಥವಾ ಅದನ್ನು ಕೂಡಾ ಸಾಲದ ಮೊತ್ತಕ್ಕೆ ಸೇರಿಸಿದ್ದಿರೋ ಎಂದು ಕಾಲೆಳೆದಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿ ಹಲವು ಬ್ಯಾಂಕ್ಗಲ್ಲಿ ಸಾಲ ಪಡೆದಿದ್ದ ಮಲ್ಯ ಅದನ್ನು ಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದರು. ಸುಸ್ತಿದಾರರಾಗಿದ್ದ ವಿಜಯ್ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಕೂಡ ಆಗಿದೆ. ಭಾರತಕ್ಕೆ ಈಗ ಮೋಸ್ಟ್ ವಾಂಟೆಡ್ ಆಗಿದ್ದಾರೆ. ಭಾರತದ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಲಂಡನ್ ಕೋರ್ಟ್ ಕಳೆದ ಡಿಸೆಂಬರ್ನಲ್ಲಿ ತೀರ್ಪು ನೀಡಿ ಹಸ್ತಾಂತರ ಮಾಡಲು ಆದೇಶ ನೀಡಿತ್ತು.