ಇಸ್ಲಾಮಾಬಾದ್, ಜೂ 6 (Daijiworld News/MSP): ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿರುವ ಪಾಕಿಸ್ತಾನ ಮುಂದಿನ ಹಣಕಾಸು ವರ್ಷದಲ್ಲಿ ರಕ್ಷಣಾ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಡಾನ್ ಪತ್ರಿಕೆ ವರದಿ ಮಾಡಿದ್ದು, ಪಾಕಿಸ್ತಾನ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಪಾಕ್ ಸೇನೆ ಸ್ವಯಂ ಪ್ರೇರಿತವಾಗಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿ ಮಾಡಿದೆ. ಅಲ್ಲದೆ ಈ ಕುರಿತು ಸೇನೆಯ ಮಾಧ್ಯಮ ಘಟಕದ ಮಹಾನಿರ್ದೇಶಕ ಮೇಜರ್ ಜನರಲ್ ಅಸೀಫ್ ಗಫೂರ್ ಕೂಡ ಟ್ವೀಟ್ ಮಾಡಿದ್ದು, 'ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳದೆಯೇ ರಕ್ಷಣಾ ವೆಚ್ಚ ಕಡಿತಗೊಳಿಸಲಾಗುವುದು. ಎಲ್ಲ ರೀತಿಯ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ.
ಸ್ವ ಇಚ್ಚೆಯಿಂದ ರಕ್ಷಣಾ ಬಜೆಟ್ ಕಡಿತ ಮಾಡಲು ನಿರ್ಧರಿಸಿದ್ದೇವೆ, ಆದರೆ ದೇಶಕ್ಕೆ ಎದುರಾಗುವ ಅಪಾಯಗಳಿಗೆ ಕೂಡಲೇ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಜೂನ್ 11ರಂದು ಸರ್ಕಾರದ ಬಜೆಟ್ ಮಂಡನೆಯಾಗಲಿದೆ. ಸೇನೆಯ ಈ ನಿರ್ಧಾರದ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮೆಚ್ಚುಗೆ ಸೂಚಿಸಿದ್ದಾರೆ.