ವಾಷಿಂಗ್ಟನ್, ಜೂ 05 (Daijiworld News/MSP): ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. 2021 ರ ಹೊತ್ತಿಗೆ ಚೀನಾಗಿಂತ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.1.5 ರಷ್ಟು ಹೆಚ್ಚಳವಾಗಿರಲಿದೆ. ಹೀಗಾಗಿ ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಶೇ. 7.5 ರಷ್ಟು ಬೆಳವಣಿಗೆಯಾಗಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
2018/19 ಆರ್ಥಿಕ ವರ್ಷದಲ್ಲಿ ಭಾರತ ಆರ್ಥಿಕತೆ ಶೇ. 7.2ರಷ್ಟು ವೃದ್ದಿಯಾಗಿದೆ ಎಂದು ವಿಶ್ವಸಂಸ್ಥೆ ವರದಿ ಅಭಿಪ್ರಾಯಪಟ್ಟಿತ್ತು ಈ ಮೂಲಕ ಇತ್ತೀಚೆಗೆ ಎರಡನೇ ಬಾರಿಗೆ ಅಧಿಕಾರ ಹಿಡಿದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶುಭ ಸುದ್ದಿ ನೀಡಿದೆ. ಇದೇ ವೇಳೆ ಚೀನಾ ದೇಶದ ಆರ್ಥಿಕ ಬೆಳವಣಿಗೆ ಮುಂದಿನ ಮೂರು ವರ್ಷಗಳಲ್ಲಿ ಸತತ ಇಳಿಮುಖವಾಗಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಸರ್ಕಾರದ ಬಳಕೆ ಪ್ರಮಾಣ ಇಳಿಕೆಯಾಗಿದ್ದು, ಹೂಡಿಕೆ ಹೆಚ್ಚಳ ಮತ್ತು ಮೂಲಭೂತ ಸೌಕರ್ಯ ಸುಧಾರಿಸಲು ಈ ಬೆಳವವಣಿಗೆ ಸಹಾಯಕಾರಿ ಎಂದು ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಯ ಸ್ಥಾನವನ್ನು ಉಳಿಸಿಕೊಳ್ಳುವತ್ತ ದಾಂಗುಡಿ ಇಡುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.