ವಾಷಿಂಗ್ಟನ್, ಜೂ04(Daijiworld News/SS): ಟ್ರಂಪ್ ಸರ್ಕಾರ ಅಮೆರಿಕದ ವೀಸಾ ನಿಯಮಗಳಲ್ಲಿ ಹಲವು ಬದಲಾವಣೆ ತಂದಿದ್ದು, ಇನ್ನು ಮುಂದೆ ವೀಸಾಗೆ ಅರ್ಜಿ ಸಲ್ಲಿಸುವವರು ತಮ್ಮ ಸಾಮಾಜಿಕ ಜಾಲತಾಣಗಳ ಮಾಹಿತಿಗಳನ್ನೂ ನೀಡಬೇಕು ಎಂದು ಹೇಳಿದೆ.
ಅಮೆರಿಕ ವಿದೇಶಾಂಗ ಇಲಾಖೆ ಹೊಸ ಕಾನೂನು ಜಾರಿ ಮಾಡಿದ್ದು, ವೀಸಾ ಪಡೆಯುವವರು ಅರ್ಜಿ ಜತೆ ಸಾಮಾಜಿಕ ಜಾಲತಾಣಗಳ ವಿವರ, ಕಳೆದ ಐದು ವರ್ಷಗಳಿಂದ ಬಳಸುತ್ತಿರುವ ಇ ಮೇಲ್ ಐಡಿ ವಿವರ ಮತ್ತು ಫೋನ್ ನಂಬರ್ ನೀಡಬೇಕಾಗುತ್ತದೆ.
ಮಾತ್ರವಲ್ಲ, 15 ವರ್ಷದ ಜೀವನ ಇತಿಹಾಸ, ಆ ವೇಳೆ ಯಾವುದಾದರೂ ಅಪಘಾತ ಸಂಭವಿಸಿ ದೇಹದಲ್ಲಿ ಬದಲಾವಣೆ ಉಂಟಾಗಿದ್ದರೆ, ಅದರ ಬಗ್ಗೆಯೂ ವೀಸಾ ಅಧಿಕಾರಿಗಳು ಪ್ರಶ್ನೆ ಕೇಳುತ್ತಾರೆ. 15 ವರ್ಷಗಳಿಂದ ಎಲ್ಲೆಲ್ಲಿ ವಾಸವಾಗಿದ್ದೀರಿ, ಶಿಕ್ಷಣ, ಉದ್ಯೋಗ ಸೇರಿ ಅನೇಕ ರೀತಿಯ ಮಾಹಿತಿಗಳನ್ನು ನೀಡಬೇಕಿದೆ.
ಹೆಚ್ಚುತ್ತಿರುವ ಭಯೋತ್ಪಾದಕ ಕೃತ್ಯ ಹಾಗೂ ನಾಗರಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಅಮೆರಿಕ ವೀಸಾ ನಿಯಮದಲ್ಲಿ ಈ ಬದಲಾವಣೆ ತಂದಿದೆ. ನಮ್ಮ ದೇಶಕ್ಕೆ ಬರುವ ಪ್ರತಿಯೊಬ್ಬರ ಇತಿಹಾಸ ಮತ್ತು ಮಾಹಿತಿಯನ್ನು ನಾವು ಹೊಂದಿರುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವೀಸಾ ಹೊಸ ನಿಯಮ ಸುಮಾರು 14.7 ಕೋಟಿ ಜನರ ಮೇಲೆ ಪ್ರಭಾವ ಬೀರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ರಾಜತಾಂತ್ರಿಕ ಅಧಿಕಾರಿ ವಲಯ ಹಾಗೂ ಕೆಲ ವರ್ಗದ ವೀಸಾ ಅರ್ಜಿದಾರರಿಗೆ ಮಾತ್ರ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳ 5 ವರ್ಷದ ವರದಿ, ಹಳೆಯ ಪಾಸ್ಪೋರ್ಟ್ ವಿವರ ಮತ್ತು ನಂಬರ್, 5 ವರ್ಷದಿಂದ ಬಳಸಿರುವ ಇಮೇಲ್, ಫೋನ್ ನಂಬರ್, ಉದ್ಯೋಗ, ವಲಸೆ ಸೇರಿ ಕಳೆದ 15 ವರ್ಷಗಳ ಮಾಹಿತಿಯ ದಾಖಲೆಗಳು ಕಡ್ಡಾಯವಾಗಿದೆ.
ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿರುವ ರಾಷ್ಟ್ರಗಳ ನಾಗರಿಕರು ಮಾತ್ರ ಇಷ್ಟೊಂದು ದಾಖಲೆ, ವಿವರಗಳನ್ನು ನೀಡಬೇಕಿತ್ತು. ಇದೀಗ ಟ್ರಂಪ್ ಸರ್ಕಾರವೂ ಅಮೆರಿಕದ ವೀಸಾ ನಿಯಮಗಳಲ್ಲಿ ಹಲವು ಬದಲಾವಣೆ ತಂದಿದೆ.