ಇಸ್ಲಾಮಾಬಾದ್,ನ.09(DaijiworldNews/TA):ಪಾಕಿಸ್ತಾನದ ಬಲೂಚಿಸ್ತಾನದ ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯಾ ಸ್ಫೋಟ ಸಂಭವಿಸಿದ್ದು, 25 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಫೋಟ ಸಂಭವಿಸಿದಾಗ ಕ್ವೆಟ್ಟಾದ ಮುಖ್ಯ ರೈಲು ನಿಲ್ದಾಣವು ಕಿಕ್ಕಿರಿದು ತುಂಬಿತ್ತು ಎಂದು ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದೆ. ನಂತರ ಪ್ಲಾಟ್ಫಾರ್ಮ್ನಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮೇಲ್ಛಾವಣಿ ಹಾರಿಹೋಗಿದ್ದ ದೃಶ್ಯ ಕೂಡ ಕಂಡುಬಂದಿದೆ.
ಪೇಶಾವರಕ್ಕೆ ತೆರಳುವ ರೈಲು ಹೊರಡುವ ಹಂತದಲ್ಲಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಇದು ಆತ್ಮಹತ್ಯಾ ಸ್ಫೋಟ ಎಂದು ತೋರುತ್ತದೆ ಎಂಬುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 44 ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕ್ವೆಟ್ಟಾದಲ್ಲಿ ಎರಡು ಬಾಂಬ್ ಸ್ಫೋಟಗಳು ಸ್ಫೋಟಗೊಂಡಿವೆ ಎಂದು ಹೇಳಲಾಗುತ್ತಿದೆ. ಒಂದು ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದರೆ, ಎರಡನೇ ಸ್ಫೋಟದಲ್ಲಿ ಸುಮಾರು 15 ಜನರು ಗಾಯಗೊಂಡಿದ್ದಾರೆ. ಈ ಬಾಂಬ್ ಸ್ಫೋಟವನ್ನು ಯಾರು ಮಾಡಿದ್ದಾರೆ ಮತ್ತು ಏಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.