ಸಿರಿಯಾ,ಜೂ03(Daijiworld News/AZM): ಕಾರು ಬಾಂಬ್ ಸ್ಫೋಟದಲ್ಲಿ 19 ಮಂದಿ ಮೃತಪಟ್ಟು ಹಲವರಿಗೆ ಗಾಯಗಳಾದ ಘಟನೆ ಸಿರಿಯಾದ ಭಯೋತ್ಪಾದಕರ ನಿಯಂತ್ರಣದಲ್ಲಿರುವ ವಾಯುವ್ಯ ಪ್ರಾಂತದ ಮಾರುಕಟ್ಟೆ ಮತ್ತು ಮಸೀದಿ ಬಳಿ ನಡೆದಿದೆ.
ಅಲೆಪ್ಪೋ ಪ್ರಾಂತ್ಯದ ಉಗ್ರರ ಪ್ರಾಬಲ್ಯದ ಟರ್ಕಿ ವಲಯದ ಅಜಾಜ್ನಲ್ಲಿ ನಡೆದ ಈ ಭಾರೀ ಕಾರ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರಲ್ಲಿ ನಾಲ್ವರು ಮಕ್ಕಳೂ ಸೇರಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಉಗ್ರಗಾಮಿಗಳ ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಬ್ರಿಟನ್ ಮೂಲದ ವೀಕ್ಷಣಾ ಸಂಸ್ಥೆ ಹೇಳಿದೆ.
ಭಾನುವಾರ ರಾತ್ರಿ ಜನನಿಬಿಡ ಮಾರುಕಟ್ಟೆಯಲ್ಲಿ ಹೆಚ್ಚು ಜನರಿದ್ದರು. ಹತ್ತಿರದಲ್ಲೇ ಇದ್ದ ಮಸೀದಿಯಲ್ಲಿ ಅನೇಕರು ಪ್ರಾರ್ಥನೆ ಸಲ್ಲಿಸಿ ಹೊರಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಸ್ಫೋಟಕಗಳಿದ್ದ ಕಾರು ಸ್ಪೋಟಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಸುಟ್ಟು ಕರಕಲಾಗಿದೆ.