ಇಸ್ಲಾಮಾಬಾದ್ , ಜೂ 03 (Daijiworld News/MSP): ರಂಜಾನ್ ನಿಮಿತ್ತ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರ ಕಚೇರಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಭಾರತೀಯ ಅತಿಥಿಗಳಿಗೆ ಭದ್ರತೆ ನೆಪದಲ್ಲಿ ಪಾಕಿಸ್ತಾನದ ಯೋಧರು ಹಾಗೂ ಪೊಲೀಸರು ಕಿರುಕುಳ ನೀಡಿ ಅವಮಾನಿಸಿ ವಾಪಾಸ್ ಕಳುಹಿಸುವ ಮೂಲಕ ಪಾಕಿಸ್ತಾನ ಉದ್ಧಟತನದಿಂದ ನಡೆದುಕೊಂಡಿದೆ.
ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಅವರು ಇಸ್ಲಾಮಾಬಾದ್ನ ಸೆರೆನಾ ಹೋಟೆಲ್ನಲ್ಲಿ ಶನಿವಾರ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿದ್ದರು. ಈ ಕೂಟಕ್ಕೆ ಲಾಹೋರ್ ಹಾಗೂ ಕರಾಚಿಯಿಂದ ನೂರಾರು ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿತ್ತು.ಸರ್ಕಾರಿ ಅಧಿಕಾರಿಗಳು, ಸಂಸದರು, ಮಾಧ್ಯಮ ಪ್ರತಿನಿಧಿಗಳು, ನಿವೃತ್ತ ಸೇನಾ ಅಧಿಕಾರಿಗಳು, ಉದ್ಯಮಿಗಳು ಮುಂತಾದವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅಲ್ಲಿ ಭದ್ರತೆಗೆ ನೋಡಿಕೊಳ್ಳುತ್ತಿದ್ದ ಪಾಕ್ ಸೈನಿಕರು, ಹೋಟೆಲ್ ಪ್ರವೇಶಕ್ಕೂ ಮುನ್ನ ಭದ್ರತೆ ತಪಾಸಣೆಯ ನೆಪವೊಡ್ಡಿ ಒಂದಲ್ಲ ಒಂದು ಕಾರಣ ನೀಡಿ ಮುನ್ನೂರಕ್ಕೂ ಹೆಚ್ಚು ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದಾರೆ.
ಒಂದಷ್ಟು ಭಾರತೀಯ ಅತಿಥಿಗಳಿಗೆ ಒಳಹೋಗಲು ಬಿಡದೆ, ಕಾರ್ಯಕ್ರಮಕ್ಕೆ ನೀವು ಹಾಜರಾಗಬಾರದು ಎಂದು ಬೆದರಿಸಿ ವಾಪಸ್ ಕಳುಹಿಸಲಾಗಿದೆ. ಕೆಲವು ಅತಿಥಿಗಳ ಕೈಯ್ಯಲ್ಲಿದ್ದ ಮೊಬೈಲ್ ಫೋನುಗಳನ್ನೂ ಕಿತ್ತುಕೊಳ್ಳಲಾಗಿದೆ. ಇನ್ನು ಕೆಲವರಿಗೆ ಇಫ್ತಾರ್ ರದ್ದುಪಡಿಸಿಲಾಗಿದೆ ಎಂದು ವಾಪಾಸ್ ಕಳುಹಿಸಿದರೆ ಇನ್ನು ಕೆಲವರು ಒತ್ತಾಯ ಮಾಡಿ ಕೇಳಿದಾಗ ಮತ್ತೊಂದು ಗೇಟ್ ಮೂಲಕ ಬರುವಂತೆ ತಿಳಿಸಲಾಗಿದೆ. ಅಲ್ಲಿಗೆ ಹೋದರೆ ಗೇಟ್ ಮುಚ್ಚಲಾಗಿತ್ತು್ ಎಂದು ದೂರಿದ್ದಾರೆ.
ಪಾಕಿಸ್ತಾನದ ಈ ಕ್ರಮವನ್ನು ಭಾರತದ ತೀವ್ರವಾಗಿ ಆಕ್ಷೇಪಿಸಿದ್ದು, ಪಾಕಿಸ್ತಾನ ಭದ್ರತಾ ಅಧಿಕಾರಿಗಳ ಹೇಯಕೃತ್ಯ ಎಂದಿದೆ.