ವಾಷಿಂಗ್ಟನ್, ಜೂ 03 (Daijiworld News/MSP): ವಿಚಿತ್ರ , ಅವಹೇಳಕಾರಿ, ಮನಸ್ಸಿಗೆ ಬಂದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ, ಅಂತವರಿಗೆ ಇನ್ಮುಂದೆ ಅಮೆರಿಕ ವೀಸಾ ಪಡೇಯುವುದು ಕಷ್ಟ ಸಾಧ್ಯವಾಯಿತು.
ಯಾಕೆಂದರೆ ಅಮೆರಿಕಾ ವೀಸಾ ಪಡೆಯಲು ಇಚ್ಚಿಸುವವರು ಇನ್ನು ಮುಂದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎನ್ನೋ ಹೊಸ ನಿಯಮವನ್ನು ಅಮೆರಿಕ ಜಾರಿಗೆ ತಂದಿದೆ. ವಿದೇಶಿಯರು ಅಮೆರಿಕಾಕ್ಕೆ ಆಗಮಿಸುವ ಮುನ್ನ ೫ ವರ್ಷದಲ್ಲಿ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಮಾಹಿತಿ ನೀಡಬೇಕು. ಅಲ್ಲದೆ ಇಲ್ಲಿ ಇನ್ನೊಂದು ಕಾಲಂ ಕೂಡಾ ಇದ್ದು ಸಾಮಾಜಿಕ ಮಾಧ್ಯಮ ಬಳಸುತ್ತಿಲ್ಲ ಎಂಬ ಆಯ್ಕೆಗೂ ಅವಕಾಶ ಇದೆ. ಒಂದು ವೇಳೆ ನೀಡಿದ ಮಾಹಿತಿಗಳು ಸುಳ್ಳು ಎಂದು ಕಂಡುಬಂದರೆ, ಗಂಭೀರ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.
‘ಸಾಮಾಜಿಕ ಜಾಲತಾಣಗಳು ಭಯೋತ್ಪಾದನಾ ಕೃತ್ಯಗಳ ಹೆಚ್ಚಿಸುವ, ಉಗ್ರ ಚಟುವಟಿಕೆಗಳ ವೇದಿಕೆಯಾಗಿದೆ. ಈ ನಿಯಮದ ಮೂಲಕ ಇಂಥ ಮನಃಸ್ಥಿತಿಯ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಅಷ್ಟೇ ಅಲ್ಲ ಸಾಮಾಜಿಕವಾಗಿ ಅಪಾಯಕಾರಿ ವ್ಯಕ್ತಿಯನ್ನು ಈ ಮೂಲಕ ಗುರುತಿಸಬಹುದು. ಜೊತೆಗೆ ಇಂಥಹ ವ್ಯಕ್ತಿಗಳು ನಮ್ಮ ದೇಶದಲ್ಲಿ ಅಶ್ರಯ ಪಡೆಯುವುದು ತಪ್ಪಲಿದೆ’ ಎಂದಿದೆ. ಈ ನಿಯಮವು , ದೀರ್ಘಾವಧಿ ಮತ್ತು ಕಡಿಮೆ ಅವಧಿಗೆ ವೀಸಾ ಪಡೆಯುವವರಿಗೂ ಅನ್ವಯವಾಗುತ್ತದೆ. ಮುಂದಿನ ದಿನದಲ್ಲಿ ಪ್ರಯಾಣದ ಬಗ್ಗೆಯೂ ಮಾಹಿತಿಯನ್ನು ನೀಡಬೇಕು ಎನ್ನುವ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ.