ಢಾಕಾ,ಅ.17(DaijiworldNews/TA):ಆಗಸ್ಟ್ 5 ರಂದು ಭಾರತಕ್ಕೆ ಪಲಾಯನ ಮಾಡಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ಈ ವರ್ಷದ ಜುಲೈ ಮತ್ತು ಆಗಸ್ಟ್ನಲ್ಲಿ ನಡೆದ ಸಾಮೂಹಿಕ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಗಮನಿಸಿದ ನ್ಯಾಯಾಲಯ ಈ ತೀರ್ಮಾನ ಮಾಡಿದೆ . ಮುಹಮ್ಮದ್ ಯೂನಸ್ ನೇತೃತ್ವದ ಪರಿವರ್ತನಾ ಸರ್ಕಾರದಿಂದ ಮರುಸಂಘಟಿತವಾದ ನಂತರ ಅದರ ಮೊದಲ ವಿಚಾರಣೆಯಲ್ಲಿ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ಗುರುವಾರ ವಾರಂಟ್ ಹೊರಡಿಸಿದೆ.
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್ಪಿ) "ದೇಶದ ಕ್ರಾಂತಿಯನ್ನು ತಡೆಯುವ ಸಂಚು" ವಿಚಾರಣೆಯನ್ನು ಎದುರಿಸಲು ಹಸೀನಾಳನ್ನು ಹಸ್ತಾಂತರಿಸುವಂತೆ ಭಾರತಕ್ಕೆ ಕರೆ ನೀಡಿದೆ. "ನೀವು ಅವರನ್ನು ಕಾನೂನು ರೀತಿಯಲ್ಲಿ ಬಾಂಗ್ಲಾದೇಶ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂಬುದು ನಮ್ಮ ಕರೆ. ಈ ದೇಶದ ಜನರು ಅವರ ವಿಚಾರಣೆಗೆ ನಿರ್ಧಾರವನ್ನು ಮಾಡಿದ್ದಾರೆ. ಆಕೆ ಆ ವಿಚಾರಣೆಯನ್ನು ಎದುರಿಸಲಿ" ಎಂದು BNP ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಹೇಳಿದ್ದಾರೆ.
ವಿವಾದಾತ್ಮಕ ಉದ್ಯೋಗ ಕೋಟಾ ವ್ಯವಸ್ಥೆಗೆ ಸಂಬಂಧಿಸಿದಂತೆ ತನ್ನ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳ ನಂತರ ಭಾರತಕ್ಕೆ ಪಲಾಯನ ಮಾಡಿದ 76 ವರ್ಷದ ಮಾಜಿ ಪ್ರಧಾನಿ ವಿರುದ್ಧ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಗೆ ಸಲ್ಲಿಸಿದ ನಾಲ್ಕನೇ ದೂರು ಇದಾಗಿದೆ.