ಬೋನಸ್ ಐರಿಸ್, ಅ.17(DaijiworldNews/AA): ಬ್ರಿಟನ್ನ ಖ್ಯಾತ ಪಾಪ್ ಗಾಯಕ, ಲಿಯಾಮ್ ಪಾಯ್ನ್(31) ಅವರು ಅರ್ಜೆಂಟೀನಾದ ರಾಜಧಾನಿ ಬೋನಸ್ ಐರಿಸ್ನಲ್ಲಿ ತಂಗಿದ್ದ ಹೋಟೆಲ್ ಕೊಠಡಿಯ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಲಿಯಾಮ್ ಅವರ ಸಾವು ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ. ಲಿಯಾಮ್ ಸಾವಿಗೆ ಮುನ್ನ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಅವರ ಸಾವು ಹಲವಾರು ಅನುಮಾನಗಳಿಗೂ ಕಾರಣವಾಗಿದೆ.
ಲಿಯಾಮ್, ನಗರದ ಕಾಸಾ ಸರ್ ಹೋಟೆಲ್ ನ ಮೂರನೇ ಮಹಡಿಯ ತನ್ನ ಕೋಣೆಯ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾವನ್ನಪ್ಪಿದ್ದಾರೆ ಎಂದು ಬೋನಸ್ ಐರಿಸ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಬೋನಸ್ ಐರಿಸ್ ಭದ್ರತಾ ಮುಖ್ಯಸ್ಥ, 'ಸಂಜೆ ಐದು ಗಂಟೆ ವೇಳೆಗೆ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಆ ವೇಳೆಗಾಗಲೆ ಲಿಯಾಮ್ ನಿಧನ ಹೊಂದಿದ್ದರು. ಆತ ಬಹಳ ಒರಟು ಹಾಗೂ ಮಾದಕ ದ್ರವ್ಯ ವ್ಯಸನಿಯಾಗಿದ್ದರು. ಮಾದಕ ವಸ್ತು ಸೇವಿಸಿಯೇ ಆತ ಈ ಕೃತ್ಯ ಎಸಗಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಗೂ ಮುನ್ನ, ಹೋಟೆಲ್ ನ ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ 'ನಮ್ಮ ಹೋಟೆಲ್ ನಲ್ಲಿರುವ ವ್ಯಕ್ತಿ ಬಹಳ ಗಲಾಟೆ ಮಾಡುತ್ತಿದ್ದಾನೆ, ಹೋಟೆಲ್ ನ ವಸ್ತುಗಳನ್ನು ಹಾಳು ಮಾಡುತ್ತಿದ್ದಾನೆ, ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿದ್ದಾನೆ, ನೀವು ಈಗಲೇ ಇಲ್ಲಿಗೆ ಬನ್ನಿ' ಎಂದು ಮಾತನಾಡಿದ್ದಾರೆ. ಈ ಕರೆ ದಾಖಲಾಗಿದೆ. ಕೆಲವರ ಆರೋಪದ ಪ್ರಕಾರ ಪೊಲೀಸರು ಬಂದು ಬೆದರಿಸಿದ್ದರಿಂದಲೇ ಲಿಯಾಮ್ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.