ಜೆರುಸಲೆಂ,ಮೇ 30 (Daijiworld News/MSP): ಇಸ್ರೇಲ್ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಬಳಿಕ, ಮೈತ್ರಿ ಸರಕಾರವೊಂದನ್ನು ರಚಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಫಲರಾಗಿದ್ದಾರೆ. ಗಡುವು ಮುಗಿದರೂ ಹೊಸ ಸರ್ಕಾರ ರಚಿಸಲು ವಿಫಲವಾದ ಹಿನ್ನೆಲೆಯಲ್ಲಿ ಇಸ್ರೇಲ್ನಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.
ಎಪ್ರಿಲ್ 9ರಂದು ಇಸ್ರೇಲ್ನಲ್ಲಿ ಚುನಾವಣೆ ನಡೆದಿದ್ದು, ನೆತನ್ಯಾಹು ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಸಂಸತ್ ಸರ್ಕಾರ ವಿಸರ್ಜನೆ ಪರ ಮತ ಹಾಕಿದೆ. ಹೀಗಾಗಿ ಇಸ್ರೇಲ್ನಲ್ಲಿ ಕೇವಲ ಒಂದು ವರ್ಷದಲ್ಲಿ ಎರಡನೇ ಸಾರ್ವತ್ರಿಕ ಚುನಾವಣೆ ನಡೆಯುವುದು ಖಚಿತವಾಗಿದೆ. ಹೀಗಾಗಿ ಎರಡನೇ ಬಾರಿಯ ಮರು ಚುನಾವಣೆ ಮುಂದಿನ ಸೆ.17ರಂದು ನಡೆಯಲಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆ ವರದಿ ಮಾಡಿದೆ.
ಏ.9ರಂದು ನಡೆದ ಚುನಾವಣೆಯಲ್ಲಿ ಅವರ ಲಿಕುಡ್ ಪಕ್ಷ ಉತ್ತಮ ತೋರಿದರೂ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದಿರಲಿಲ್ಲ. ಇದರಿಂದ ಮೈತ್ರಿಪಕ್ಷಗಳ ಮೊರೆ ಹೋಗಲಾಗಿತ್ತು. ಮೈತ್ರಿ ಕುದುರಿಸುವುದಕ್ಕಾಗಿ ನಿಗದಿಯಾಗಿರುವ ಬುಧವಾರದ ಗಡುವಿಗೆ ಮುನ್ನ ಸಾಕಷ್ಟು ಪ್ರಯತ್ನ ಮಾಡಿದ್ದರು.