ವಾಷಿಂಗ್ಟನ್, ಮೇ29(Daijiworld News/SS): ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರತದಲ್ಲಿ ಮತ್ತೆ ಅಧಿಕಾರಕ್ಕೇರಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೋ, ಭಾರತದ ಸಾರ್ವತ್ರಿಕ ಚುನಾವಣೆ ಬಳಿಕ ಟ್ರಂಪ್ ಆಡಳಿತ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸೌಹಾರ್ದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಿದೆ. ಈ ಸಂಬಂಧ ಭಾರತದೊಂದಿಗಿನ ವಾಣಿಜ್ಯ ವಹಿವಾಟುಗಳು, ಒಪ್ಪಂದಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಲು ಅಮೆರಿಕ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರವಾಗಿದ್ದು, ಈ ಹಿಂದಿನಂತೆಯೇ ಭವಿಷ್ಯದಲ್ಲೂ ಕೂಡ ಉಭಯ ದೇಶಗಳ ಸೌಹಾರ್ಧ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ವಿಶ್ವದ ಆರು ದೊಡ್ಡ ಆರ್ಥಿಕತೆಗಳಲ್ಲಿ ಭಾರತವೂ ಕೂಡ ಒಂದು. ಮಾತ್ರವಲ್ಲ, ಉಭಯ ದೇಶಗಳ ನಡುವಿನ ವಾಣಿಜ್ಯ ಸಹಕಾರ ಕೂಡ ವೃದ್ದಿಯಾಗಲಿದೆ. ಈ ಕುರಿತಂತೆ ಟ್ರಂಪ್ ಆಡಳಿತ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಮೈಕ್ ಪೊಂಪಿಯೋ ಹೇಳಿದ್ದಾರೆ.