ತಿರುವನಂತಪುರಂ, ಆ.07(DaijiworldNews/AA): ಕೇರಳದಲ್ಲಿ ವಯನಾಡಿನಲ್ಲಿ ಉಂಟಾದ ಭೂಕುಸಿತ ದುರಂತಕ್ಕೆ ಮೋಹನ್ ಲಾಲ್, ಅಲ್ಲು ಅರ್ಜುನ್ ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಪರಿಹಾರ ನೀಡುತ್ತಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟ ಪ್ರಭಾಸ್ ಕೇರಳ ಮುಖ್ಯಮಂತ್ರಿ ಪರಿಹಾರನಿಧಿಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ದುರಂತದಲ್ಲಿ 400ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 150ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಘಟನೆಗೆ ನೆರೆಯ ರಾಜ್ಯದವರೂ ಪರಿಹಾರ ನೀಡುವ ಮೂಲಕ ಕೈ ಜೋಡಿಸಿದ್ದಾರೆ.
ಅಲ್ಲು ಅರ್ಜುನ್ ಅವರು 50 ಲಕ್ಷ ರೂಪಾಯಿ, ಚಿರಂಜೀವಿ, ರಾಮ್ ಚರಣ್ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಇದನ್ನು ಸರ್ಕಾರ ಪರಿಹಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಈ ಪರಿಹಾರ ಹಣದಿಂದ ಆಹಾರ, ಬಟ್ಟೆ ಖರೀದಿಗೆ ಸಹಾಯ ಆಗಲಿದೆ. ಇದರೊಂದಿಗೆ ಸ್ಥಳೀಯರು ಆಹಾರ, ಬಟ್ಟೆ ಹಾಗೂ ಮೆಡಿಕಲ್ ಕಿಟ್ಗಳನ್ನು ನೀಡಿ ನೆರವಾಗುತ್ತಿದ್ದಾರೆ.