ಬೆಂಗಳೂರು, ಜು.29(DaijiworldNews/AA): ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಅವರ ಮದುವೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮದುವೆಗೆ ಈಗಾಗಲೇ ಭರ್ಜರಿ ತಯಾರಿ ಆರಂಭವಾಗಿದೆ. ಇದೀಗ ತರುಣ್ ಮತ್ತು ಸೋನಾಲ್ ತಮ್ಮ ವಿವಾಹ ಪತ್ರಿಕೆಯನ್ನ ಪೂರ್ತಿಯಾಗಿ ಪರಿಸರ ಸ್ನೇಹಿಯಾಗಿ ಮಾಡಿಸಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರೆಟಿಗಳು ಪತ್ರಿಕೆಯೊಂದಿಗೆ ಒಂದು ಗಿಡ ಕೊಟ್ಟು ಮದುವೆಗೆ ಕರೆಯುತ್ತಾರೆ. ಆದರೆ ತರುಣ್ ನೀಡುತ್ತಿರುವ ಈ ಇನ್ವಿಟೇಷನ್ ನಲ್ಲಿ ಮದುವೆ ಪತ್ರಿಕೆ, ಒಂದು ಖಾಲಿ ಪುಸ್ತಕ ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ 2 ಪೆನ್ ಮತ್ತು ಒಂದು ಸೀಡ್ ಬಾಲ್ ಇದೆ.
ಈ ಮೂಲಕ ಇವರಿಬ್ಬರ ಮದುವೆಯಾದ ಬಳಿಕ ಪತ್ರಿಕೆಯನ್ನು ಏನು ಮಾಡೋದು ಎಂಬ ಯೋಚನೆ ಮಾಡೋ ಹಾಗಿಲ್ಲ. ಯಾಕೆಂದರೆ ತರುಣ್ ಹಾಗೂ ಸೋನಾಲ್ ಅವರ ಮದುವೆ ಪತ್ರಿಕೆಯನ್ನು ಒಂದು ಮಣ್ಣಿನ ಪಾಟ್ನಲ್ಲಿ ಹಾಕಿದರೆ ಅದು ಮಣ್ಣಿನಲ್ಲಿ ಬೆರೆದು ಗಿಡವಾಗುತ್ತದೆ. ಜೊತೆಗೆ ಅವರು ನೀಡಿರುವ ಖಾಲಿ ಪುಸ್ತಕದಲ್ಲಿ ಬರೆದು ಹಾಳೆ ಖಾಲಿ ಆದ ನಂತರ ಅದು ಮಣ್ಣು ಸೇರಿದ್ದರೆ ಅದ್ರಿಂದಲೂ ಹೂವಿನ ಗಿಡ ಬೆಳೆಯುತ್ತೆ.
ಇನ್ನು ಅವರು ನೀಡಿರುವ ಪೆನ್ ಮತ್ತು ಪೆನ್ಸಿಲ್ ಬರೆದು ಖಾಲಿ ಆದರೆ ಅದನ್ನು ಮಣ್ಣಿಗೆ ಹಾಕಿದರೆ ಚಂದದ ಹೂವಿನ ಹಾಗೂ ತರಕಾರಿ ಗಿಡ ಬೆಳೆಯುತ್ತೆ. ಹೀಗೆ ತಮ್ಮ ವಿವಾಹದ ಆಹ್ವಾನ ಪತ್ರಿಕೆಯನ್ನು ವಿಶೇಷವಾಗಿ ಮತ್ತು ಪರಿಸರ ಸ್ನೇಹಿ ಆಗಿ ತರುಣ್ ಮಾಡಿಸಿದ್ದಾರೆ.