ಮುಂಬೈ, ಜು. 19(DaijiworldNews/AA): 4 ವರ್ಷಗಳ ಕಾಲ ಜೊತೆಯಾಗಿ ಇದ್ದ ಹಾರ್ದಿಕ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ನಟಿ ನತಾಶಾ ಸ್ಟಾಂಕೋವಿಕ್ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಬೇರೆಯಾಗುತ್ತಿದ್ದೇವೆ. ನಾವು ಜೊತೆಯಾಗಿ ಇರಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕೊನೆಗೆ ಭಿನ್ನಾಭಿಪ್ರಾಯ ಮಿತಿ ಮೀರಿದಾಗ ನಮ್ಮ ಒಳ್ಳೆಯದಕ್ಕೆ ಬೇರೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದೇವೆ. ಇದು ನಮಗೆ ಕಠಿಣ ನಿರ್ಧಾರ ಎಮದು ಬರೆದುಕೊಂಡಿದ್ದಾರೆ.
ನಮ್ಮಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದು ಅಗಸ್ತ್ಯ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಅವನಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಾವು ನಿಲ್ಲುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ ನಟಿ ನತಾಶಾ ಅವರು ತಮ್ಮ ಹೆಸರಿನೊಂದಿಗೆ ಇದ್ದ ಪಾಂಡ್ಯಾ ಹೆಸರನ್ನು ಖಾತೆಯಿಂದ ತೆಗೆದು ಹಾಕಿದ್ದರು. ಅಲ್ಲಿಂದ ಇವರಿಬ್ಬರ ವಿಚ್ಛೇದನದ ಬಗ್ಗೆ ವದಂತಿ ಹಬ್ಬಿತ್ತು. ಆದರೆ ಇದೀಗ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಅವರು ತಮ್ಮ ವಿಚ್ಛೇದನದ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.