ಮುಂಬೈ, ಜೂ.24(DaijiworldNews/AA): ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಅವರು ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಇದೀಗ ಇವರಿಬ್ಬರು ಮದುವೆಯಾದ ಬೆನ್ನಲ್ಲೇ ನಟಿಯ ಕುಟುಂಬಕ್ಕೆ ಸಂಕಷ್ಟ ಎದುರಾಗಿದ್ದು, ಬರೋಬ್ಬರಿ 250 ಕೋಟಿ ರೂ. ಸಾಲದ ಸುಳಿಯಲ್ಲಿ ಭಗ್ನಾನಿ ಕುಟುಂಬ ಸಿಲುಕಿದೆ.
ನಟಿ ರಕುಲ್ ಪ್ರೀತ್ ಸಿಂಗ್ ಮಾವ ವಶು ಭಗ್ನಾನಿ ನೇತೃತ್ವದ ಪೂಜಾ ಎಂಟೈನ್ಮೆಂಟ್ ಸಂಸ್ಥೆ ಅಡಿ ಇತ್ತೀಚೆಗೆ ನಿರ್ಮಾಣವಾದ 2 ಸಿನಿಮಾಗಳಿಂದ ಭಗ್ನಾನಿ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿದೆ. ಹೌದು ಈ ಎರಡು ಸಿನಿಮಾಗಳನ್ನು ಕೋಟಿಗಟ್ಟಲೆ ವೆಚ್ಚದಲ್ಲಿ ನಿರ್ಮಾಣ ಮಾಡಲಾಯಿತಾದರೂ ನಿರೀಕ್ಷೆಯ ಕಲೆಕ್ಷನ್ ಮಾಡುವಲ್ಲಿ ವಿಫಲವಾಯಿತು.
2023ರ ಅಕ್ಟೋಬರ್ ನಲ್ಲಿ ಬಿಡುಗಡೆಗೊಂಡ ಟೈಗರ್ ಶ್ರಾಫ್ ನಾಯಕ ನಟನಾಗಿ ನಟಿಸಿರುವ, ವಿಕಾಸ್ ಬಹ್ಲ್ ನಿರ್ದೇಶನ 'ಗಣಪತ್' ಸಿನಿಮಾವನ್ನು 190 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಬಿಗ್ ಬಿ ಕೂಡ ನಟಿಸಿದ್ದರು. ಆದರೆ ಈ ಸಿನಿಮಾ ಕೇವಲ 15 ಕೋಟಿಗೂ ಮಿಕ್ಕಿ ಕಲೆಕ್ಷನ್ ಮಾಡುವಲ್ಲಿ ಸಫಲವಾಗಿತ್ತು.
ಇನ್ನು ಈ ಏಟಿನಿಂದ ಪೂಜಾ ಎಂಟರ್ಟೇನ್ಮೆಂಟ್ ಸಂಸ್ಥೆ ಚೇತರಿಸಿಕೊಳ್ಳುವುದಕ್ಕೂ ಮುನ್ನವೇ 'ಬಡೆ ಮಿಯಾ ಚೋಟೆ ಮಿಯಾ' ಸಿನಿಮಾವನ್ನು ಸುಮಾರು 300 ಕೋಟಿ. ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಯಿತು. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನಟಿಸಿದ್ದರು. ಆದರೆ ಈ ಸಿನಿಮಾ ಕೇವಲ 100 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ ಈ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋತ ಪರಿಣಾಮ ಭಗ್ನಾನಿ ಕುಟುಂಬವು ಈಗ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.