ಮುಂಬೈ, ಜೂ. 12(DaijiworldNews/AK):ಭಾರತದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಸಾಹಸಗಾಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಕಿರಣ್ ಬೇಡಿ ಬಯೋಪಿಕ್ ಬರಲಿದೆ ಎಂದು ಅನೌನ್ಸ್ ಕೂಡ ಮಾಡಿದ್ದಾರೆ.
ಡ್ರೀಮ್ ಸ್ಲೇಟ್ ಪಿಕ್ಚರ್ಸ್ ಅಡಿಯಲ್ಲಿ ಗೌರವ್ ಚಾವ್ಲಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಅನೌನ್ಸ್ಮೆಂಟ್ ಬಳಿಕ ಕಿರಣ್ ಬೇಡಿ ಮಾತನಾಡಿ, ಈ ಕಥೆ ಕೇವಲ ನನ್ನ ಕಥೆಯಲ್ಲ. ಇದು ಭಾರತೀಯ ಮಹಿಳೆಯ ಕಥೆಯಾಗಿದೆ. ಭಾರತದಲ್ಲಿ ಬೆಳೆದ, ಭಾರತದಲ್ಲಿ ಅಧ್ಯಯನ ಮಾಡಿದ, ಭಾರತೀಯ ಪೋಷಕರಿಂದ ಬೆಳೆದ ಮತ್ತು ತನ್ನ ವೃತ್ತಿ ಜೀವನದುದ್ದಕ್ಕೂ ಭಾರತದ ಜನರಿಗಾಗಿ ಕೆಲಸ ಮಾಡಿದ ಮಹಿಳೆಯ ಕಥೆ. ನಾವು ಈ ಚಿತ್ರವನ್ನು 50ನೇ ಅಂತಾರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.
ಡೈರೆಕ್ಟರ್ ಕುಶಾಲ್ ಚಾವ್ಲಾ ಮಾತನಾಡಿ, ಈ ಚಿತ್ರವು ಪ್ರೀತಿಯ ಶ್ರಮ. ನಾಲ್ಕು ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿ ಮಾಡಿರುವ ಸಿನಿಮಾ ಇದಾಗಿದೆ. ಡಾ.ಕಿರಣ್ ಬೇಡಿಯವರ ಜೀವನದ ಕುರಿತು ಸಿನಿಮಾ ಮಾಡಿ ನಿರ್ದೇಶಿಸಿರುವುದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ.
ಅಂದಹಾಗೆ, ಈ ಚಿತ್ರಕ್ಕೆ ‘ದಿ ನೇಮ್ ಯು ನೋ: ದ ಸ್ಟೋರಿ ಯು ಡೋಂಟ್’ ಎಂದು ಟೈಟಲ್ ಇಡಲಾಗಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ.