ಮುಂಬೈ, ಜೂ. 11(DaijiworldNews/AA): ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ನಟ ಝಹೀರ್ ಇಕ್ಬಾಲ್ ಅವರೊಂದಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಇದೀಗ ಈ ಜೋಡಿ ಜೂನ್ 23ರಂದು ಹಸೆಮಣೆ ಏರಲಿದ್ದಾರೆ ಎಂದು ತಿಳಿದುಬಂದಿದೆ.
ಸೋನಾಕ್ಷಿ ಹಾಗೂ ಝಹೀರ್ ಅವರು ಹಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದರು. ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಈ ಜೋಡಿ ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಇದೀಗ ಇವರಿಬ್ಬರು ವಿವಾಹವಾಗುವ ನಿರ್ಧಾರ ತೆಗೆದುಕೊಂಡಿದ್ದು, ಕೆಲವೇ ಆಪ್ತರು, ಕುಟುಂಬದವರು ಇವರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಸೋನಾಕ್ಷಿ ಹಾಗೂ ಝಹೀರ್ ಅವರ ವಿವಾಹ ಆಮಂತ್ರಣ ಪತ್ರವನ್ನು ಮ್ಯಾಗಜಿನ್ ರೀತಿಯಲ್ಲಿ ತಯಾರಿಸಲಾಗಿದೆ. 'ಗಾಳಿಸುದ್ದಿ ನಿಜ' ಎಂದು ಆಮಂತ್ರಣ ಪತ್ರದಲ್ಲಿ ಬರೆಯಲಾಗಿದೆ. ಮುಂಬೈನ ಬಾಸ್ಟಿಯನ್ ನಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಅತಿಥಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಬರುವಂತೆ ಸೂಚಿಸಲಾಗಿದೆ. ಮದುವೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.