ಬೆಂಗಳೂರು, ಜೂ. 10(DaijiworldNews/AA): ನಟ ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವರಾಕ್ ಕುಮಾರ್ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನಟ ಯುವರಾಕ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ನಡುವೆ ಕೆಲ ವಿಚಾರಕ್ಕೆ ಮನಸ್ತಾಪ ಉಂಟಾಗಿದೆ. ಹೀಗಾಗಿ ಈ ಜೋಡಿ ಬೇರೆಯಾಗುತ್ತಿದೆ. ಪತ್ನಿ ಶ್ರೀದೇವಿಯಿಂದ ವಿಚ್ಛೇದನಕ್ಕಾಗಿ ಜೂನ್ 6ರಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಯುವ ಅವರು ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿಗೆ ಕೋರ್ಟ್ನಿಂದ ಈಗಾಗಲೇ ಡಿವೋರ್ಸ್ ನೋಟಿಸ್ ಕೂಡ ಕಳುಹಿಸಲಾಗಿದ್ದು, ಸದ್ಯ ಸಮನ್ಸ್ ಜಾರಿ ಮಾಡಿ ಜುಲೈ 4 ರಂದು ವಿಚಾರಣಾ ದಿನಾಂಕ ನಿಗದಿ ಮಾಡಲಾಗಿದೆ.
4 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವ ಹಾಗೂ ಶ್ರೀದೇವಿ ಅವರು ಇದೀಗ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಶ್ರೀದೇವಿ ಅವರು ಮದುವೆ ಬಳಿಕ ರಾಜ್ಕುಮಾರ್ ಅಕಾಡೆಮಿಯನ್ನು ನಡೆಸಿಕೊಂಡು ಹೋಗುತ್ತಿದ್ದರು. ಇನ್ನು ಯುವ ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕಳೆದ 6 ತಿಂಗಳಿಂದ ಯುವ ಹಾಗೂ ಶ್ರೀದೇವಿ ಅವರ ವಿಚ್ಛೇದನ ಸುದ್ದಿ ಹರಿದಾಡುತ್ತಿತ್ತು. ಕೆಲ ತಿಂಗಳುಗಳಿಂದ ಇಬ್ಬರೂ ಜೊತೆಯಾಗಿ ಕೂಡ ವಾಸಿಸುತ್ತಿಲ್ಲ. ಸದ್ಯ ಶ್ರೀದೇವಿ ಅವರು ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ.