ಬೆಂಗಳೂರು, ಜೂ. 05(DaijiworldNews/AA): ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ಅವರು ಬೆಂಗಳೂರು ತೊರೆದು ಕುಂದಾಪುರಕ್ಕೆ ಶಿಫ್ಟ್ ಆಗಿದ್ದು, ತಮ್ಮ ಮಗನನ್ನು ಕೂಡ ಕುಂದಾಪುರದ ಶಾಲೆಯೊಂದಕ್ಕೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ.
ನಟ ರಿಷಬ್ ಶೆಟ್ಟಿ ಅವರ 'ಕಾಂತಾರ: ಚಾಪ್ಟರ್ 1' ಸಿನಿಮಾ ಶೂಟಿಂಗ್ ಸದ್ಯ ಕುಂದಾಪುರದಲ್ಲಿ ನಡೆಯುತ್ತಿದೆ. ಹೀಗಾಗಿ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಹಾಗೂ ಮಕ್ಕಳೊಂದಿಗೆ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ.
'ಕಾಂತಾರ: ಚಾಪ್ಟರ್ 1' ಸಿನಿಮಾದ ಶೂಟಿಂಗ್ಗಾಗಿ ಕುಂದಾಪುರದಲ್ಲಿ ದೊಡ್ಡ ಸ್ಟುಡಿಯೋ ಮಾಡಿ ಸೆಟ್ ಹಾಕಲಾಗಿದ್ದು, ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿದಿದೆ. ಕುಂದಾಪುರದಲ್ಲಿಯೇ ಇಂಡೋರ್ ಹಾಗೂ ಔಟ್ಡೋರ್ ಶೂಟಿಂಗ್ ಎಲ್ಲವೂ ಮಾಡಲಾಗುತ್ತಿದೆ ಎಂದು ನಟ ರಿಷಬ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.
ಈ ಮೊದಲು ಈ ಸಿನಿಮಾಗಾಗಿ ರಿಷಬ್ ಶೆಟ್ಟಿ ಅವರು 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ಅವರು 8 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಶೂಟಿಂಗ್ 100ಕ್ಕೂ ಹೆಚ್ಚು ದಿನ ನಡೆಯಲಿದ್ದು, ವಿವಿಧ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಈ ವರ್ಷವೇ ಸಿನಿಮಾದ ಸಂಪೂರ್ಣ ಕೆಲಸ ಮುಗಿಯಲಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ನಟ ತಿಳಿಸಿದ್ದಾರೆ.