ಮುಂಬೈ, ಜೂ. 02(DaijiworldNews/AA): ದಕ್ಷಿಣ ಭಾರತದ ಸ್ಟಾರ್ ನಟಿಯಾಗಿರುವ ಕಾಜಲ್ ಅರ್ಗವಾಲ್ ಅವರು ಹಿಂದಿ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಒಂದು ಮುಖ್ಯ ವಿಷಯದಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕೆ ಹೋಲಿಸಿದರೆ ಬಾಲಿವುಡ್ ಬೆಸ್ಟ್ ಎಂದಿದ್ದಾರೆ.
ನಟಿ ಕಾಜಲ್ ಅವರು ಎರಡು ವರ್ಷದ ಹಿಂದಷ್ಟೆ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದು, ಈ ದಂಪತಿಗೆ ಒಂದು ಮಗು ಕೂಡ ಇದೆ. ಈಗಲೂ ಕೂಡ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರಿಗೆ ಮಹಿಳಾ ಪ್ರಧಾನ ಕತೆಗಳುಳ್ಳ ಸಿನಿಮಾಗಳಲ್ಲಿ ಹೆಚ್ಚಾಗಿ ದೊರೆಯುತ್ತಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮಗೆ ದೊರೆಯುತ್ತಿರುವ ಸಿನಿಮಾ ಅವಕಾಶಗಳ ಬಗ್ಗೆ ಮಾತನಾಡಿದ ಅವರು, ಮದುವೆಯಾದ ಬಳಿಕ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿಲ್ಲ. ಮಹಿಳಾ ಪ್ರಧಾನ ಸಿನಿಮಾಗಳು, ಪತ್ತೆಧಾರಿ ಕತೆಗಳುಳ್ಳ ಸಿನಿಮಾಗಳೇ ಹೆಚ್ಚಾಗಿ ಸಿಗುತ್ತಿದೆ ಎಂದು ದಕ್ಷಿಣ ಭಾರತ ಚಿತ್ರರಂಗದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಬಾಲಿವುಡ್ನಲ್ಲಿ ಮದುವೆಯಾದ ನಟಿಯರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ದೀಪಿಕಾ ಪಡುಕೋಣೆಗೆ 'ಫೈಟರ್' ನಂತಹಾ ಆಕ್ಷನ್-ರೊಮ್ಯಾಂಟಿಕ್ ಸಿಮಾದಲ್ಲಿ ಅವಕಾಶ ದೊರೆಯುತ್ತದೆ. ಆಲಿಯಾ ಭಟ್ಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಂತಹ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿವೆ. ಆದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ಪರಿಸ್ಥಿತಿ ಇಲ್ಲ. ನಟಿ ಮದುವೆಯಾದ ಕೂಡಲೇ ಆಕೆಗೆ ರೊಮ್ಯಾಂಟಿಕ್ ಪಾತ್ರಗಳು, ಮುಖ್ಯ ನಾಯಕಿಯ ಪಾತ್ರಗಳು ಸಿಗುವುದು ನಿಂತೇ ಹೋಗುತ್ತವೆ. ಈ ವಿಷಯದಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಬಾಲಿವುಡ್ ಬೆಸ್ಟ್ ಎಂದು ಅವರು ಹೇಳಿದ್ದಾರೆ.
ಇನ್ನು ಮದುವೆಯಾಗಿ, ಮಕ್ಕಳಾದ ಎಷ್ಟೋ ನಟಿಯರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಪಾತ್ರಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಆದರೆ ಬಾಲಿವುಡ್ನಲ್ಲಿ ಆ ರೀತಿಯ ಪರಿಸ್ಥಿತಿಯಿಲ್ಲ. ದಕ್ಷಿಣ ಭಾರತದಲ್ಲಿ ಸ್ಟಿರಿಯೋಟೈಪ್ ಕಾಸ್ಟಿಂಗ್ ಮಾಡಲಾಗುತ್ತದೆ. ಆ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಹೇಮಾ ಮಾಲಿನಿ, ಶರ್ಮಿಳಾ ಠಾಗೋರ್ ಅಂಥಹವರು ವರ್ಷಗಳು ಕಳೆದರು ನಾಯಕಿಯರಾಗಿ ನಟಿಸಿದ್ದರು. ದಕ್ಷಿಣ ಭಾರತದಲ್ಲಿ ನಟಿ ನಯನತಾರಾ ಈಗಲೂ ಸಹ ತಮ್ಮದೇ ರೀತಿಯ ರೊಮ್ಯಾಂಟಿಕ್, ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.