ಶಿಮ್ಲಾ, ಮೇ. 19(DaijiworldNews/AA): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡಿ ಕ್ಷೇತ್ರದಿಂದ ಗೆದ್ದರೆ ಬಾಲಿವುಡ್ಗೆ ಗುಡ್ ಬೈ ಹೇಳುವುದಾಗಿ ಮಂಡಿ ಕ್ಷೇತ್ರದ ಅಭ್ಯರ್ಥಿ ನಟಿ ಕಂಗನಾ ರಾಣಾವತ್ ಘೋಷಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣ ಮುಕ್ತಾಯಗೊಳಿಸುತ್ತೇನೆ. ನಂತರ ಹಂತ-ಹಂತವಾಗಿ ಬಾಲಿವುಡ್ಗೆ ವಿದಾಯ ಹೇಳುತ್ತೇನೆ. ನನಗೆ ಬಹಳಷ್ಟು ಜನ ನಿರ್ಮಾಪಕರು ನಿಮ್ಮಲ್ಲಿ ಉತ್ತಮ ನಾಯಕಿ ಇದ್ದಾರೆ. ರಾಜಕೀಯಕ್ಕೆ ಹೋಗಬೇಡಿ. ದಯವಿಟ್ಟು ನಟನೆ ಬಿಡಬೇಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ನಾನು ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗದಿಂದ ಹೊರಬರುತ್ತೇನೆ ಎಂದಿದ್ದಾರೆ.
ಇದುವರೆಗೆ ನನಗೆ ಹಲವಾರು ರಾಷ್ಟ್ರಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿದೆ. ಆದರೆ ಮುಂಬರುವ ವೇಳೆಯಲ್ಲಿ ವರ್ಷದ ಸಂಸದ ಪ್ರಶಸ್ತಿ ಪಡೆದರೆ, ಅದೇ ನನಗೆ ಸಾರ್ಥಕ. ನಮ್ಮ ಪಕ್ಷದಲ್ಲಿ ನಮ್ಮ ಭರವಸೆಗಳು, ಮೋದಿಯವರ ಗ್ಯಾರಂಟಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆದರೆ ಇತರ ಪಕ್ಷಗಳಲ್ಲಿ ನಮ್ಮಷ್ಟು ಕಟ್ಟುನಿಟ್ಟಾದ ಶಿಷ್ಟಾಚಾರ ಹೊಂದಿರುವುದನ್ನು ನಾನು ನೋಡಿಲ್ಲ. ಆದ್ದರಿಂದ ರಾಜಕೀಯ ರಂಗದಲ್ಲಿ ಸೇವೆ ಮಾಡಬೇಕು ಅನ್ನೋದು ನನ್ನ ಮುಂದಿನ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.