ಮಂಗಳೂರು, ಮೇ07(Daijiworld News/SS): ಬಹುನಿರೀಕ್ಷಿತ ಕನ್ನಡ ಚಲನಚಿತ್ರ ಮೂಕವಿಸ್ಮಿತ ಮೇ 17ರಂದು ಕರ್ನಾಟಕ ರಾಜ್ಯದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಟ ಸಂದೀಪ್ ಮಲಾನಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಿದ್ಧ ಬರಹಗಾರ ಟಿಪಿ ಕೈಲಾಸಂರವರ ಟೊಳ್ಳುಗಟ್ಟಿ ಎನ್ನುವ ನಾಟಕವನ್ನು ಆದರಿಸಿಕೊಂಡು ಗುರುದತ್ತ್ ಶ್ರೀಕಾಂತ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಇದು ಉತ್ತಮ ಚಿತ್ರವಾಗಿದ್ದು, ಜನರಲ್ಲಿ ಬಾರೀ ನಿರೀಕ್ಷೆಯನ್ನು ಮೂಡಿಸಿದೆ. ಈ ಚಿತ್ರವನ್ನು ಸಾಗರದ ಜೋಗ್ಪಾಲ್ಸ್ ಬಳಿ ಚಿತ್ರೀಕರಿಸಿ ಹಳ್ಳಿಯ ಸೊಗಡನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದರು.
ನಿರ್ದೇಶಕ ಗುರುದತ್ತ ಶ್ರೀಕಾಂತ್ಗೆ ಇದು ಮೊದಲ ಚಿತ್ರ. ಇಪ್ಪತ್ತರ ದಶಕದಲ್ಲಿ ನಡೆಯುವ ಕಥೆಯನ್ನು ಪ್ರಸ್ತುತ ಕಾಲಘಟ್ಟಕ್ಕೆ ಹೊಂದಿಸಿಕೊಂಡು ಮಾಡಿದ್ದಾರೆ. ಇದು ಸುಮಾರು 97 ವರ್ಷಗಳ ಹಿಂದಿನ ನಾಟಕ. ಅದ್ಭುತ ನಾಟಕವಾಗಿದ್ದರಿಂದ ಚಿತ್ರ ಮಾಡಿದ್ದೇವೆ. ಬದುಕಿನ ಭಾವನೆಗಳ ಜೊತೆಗೆ ಮನರಂಜನೆಯೂ ಇಲ್ಲಿದೆ ಆ ಕಾಲದ ಕಥೆ ಈಗಿನ ಕಾಲಕ್ಕೆ ಹೇಗೆ ಸರಿಹೊಂದುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದು ಹೇಳಿದ್ದಾರೆ.
ಒಳ್ಳೆಯದು ಮತ್ತು ಕೆಟ್ಟದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ಕಂಡುಕೊಳ್ಳುತ್ತಾನೆ ಎಂಬುದು ಸಾರಾಂಶ. ಒಬ್ಬ ನಿರ್ದೇಶಕನ ಪರಿಶ್ರಮ, ಒಬ್ಬ ಫೋಟೋಗ್ರಾಫರ್ನ ಹುಡುಕಾಟ, ಒಬ್ಬ ಹುಚ್ಚನ ನಿಜವಾದ ಮನಸ್ಥಿತಿ ಹೀಗೆ ಹಲವು ಸಂಗತಿಗಳು ಒಂದೇ ಕಥೆಯಲ್ಲಿ ಹೇಗೆ ಸೃಷ್ಟಿಯಾಗುತ್ತವೆ ಎಂಬುದು ಚಿತ್ರದ ಹೈಲೈಟ್ಸ್ ಎಂದು ಹೇಳಿದರು.
ಟಿ.ಪಿ. ಕೈಲಾಸಂರ ಟೊಳ್ಳುಗಟ್ಟಿ ನಾಟಕದ ಕಥೆಯು ಮೂಕವಿಸ್ಮಿತ ಚಿತ್ರವಾಗಿ ಬೆಳ್ಳಿತೆರೆಗೆ ಬರಲು ಅಣಿಯಾಗಿದ್ದು, ಮೇ 17 ರಂದು ರಾಜ್ಯಾದಾದ್ಯಂತ ತೆರೆ ಕಾಣಲಿದೆ. ಬಾಲ್ಯದಲ್ಲಿಯೇ ರಂಗಭೂಮಿಯ ಬಗ್ಗೆ ಅತೀವ ಒಲವು ಮೂಡಿಸಿಕೊಂಡಿದ್ದ ಗುರುದತ್ ಶ್ರೀಕಾಂತ್ ಮೂಕವಿಸ್ಮಿತ ಚಿತ್ರವನ್ನು ನಿರ್ದೇಶಿಸುವ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಪಡೆದಿದ್ದಾರೆ. ಚಿತ್ರಕ್ಕೆ ಡಾ.ಚಿನ್ಮಯ ಎಂ.ರಾವ್ ಸಂಗೀತ ನೀಡಿದ್ದಾರೆ. ವಿಜಯ್ರಾಜ್ ಹಿನ್ನೆಲೆ ಸಂಗೀತವಿದೆ. ಸಿದ್ದು ಛಾಯಾಗ್ರಹಣವಿದೆ.