ಬೆಂಗಳೂರು, ಮೇ. 18(DaijiworldNews/AA): ಈ ವರ್ಷ ನನ್ನ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧಾರ ಮಾಡಿದ್ದೇನೆ ಎಂದು ನಟಿ ನಿಶ್ಚಿಕಾ ನಾಯ್ಡು ತಿಳಿಸಿದ್ದಾರೆ.
ಹೌದು ನಟಿ ನಿಶ್ಚಿಕಾ ಅವರಿಗೆ ನಾಳೆ ಅಂದರೆ ಮೇ 19ರಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರು 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ತನ್ನ ಜನುಮದಿನವನ್ನು ಆರಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ವರ್ಷ ನನ್ನ ವೈಯಕ್ತಿಕ ಜೀವನದಲ್ಲಿ ಭಾವನಾತ್ಮಕವಾಗಿ ಕೆಲವು ಏರುಪೇರುಗಳು ಆಗಿವೆ. ನನ್ನ ಪ್ರೀತಿಯ ಲಿಯೋ ಇತ್ತೀಚೆಗೆ ನಮ್ಮನ್ನೆಲ್ಲ ಬಿಟ್ಟು ಹೋದ. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಮನಸಿಗೆ ತುಂಬಾ ಆಳವಾದ ನೋವನ್ನುಂಟು ಮಾಡಿದೆ. ಅದರಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಾನು ನಿರ್ಧರಿಸಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಲಿಯೋ ನಮ್ಮ ಕುಟುಂಬದಲ್ಲಿ ಒಬ್ಬನ್ನಾಗಿದ್ದ ಮತ್ತು ಅವನ ಅನುಪಸ್ಥಿತಿಯು ನಮ್ಮ ಕುಟುಂಬದ ಮನಸ್ಸುಗಳ ಮೇಲೆ ಬಹಳ ದೊಡ್ಡ ಗಾಯ ಮಾಡಿದೆ. ದಯವಿಟ್ಟು ನನ್ನ ಭಾವನೆಗಳಿಗೆ ಬೆಲೆ ಕೊಟ್ಟು ಈ ಬಾರಿ ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ ಅಥವಾ ಉಡುಗೊರೆಗಳನ್ನು ತರಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಎಂದಿಗೂ ಚಿರಋಣಿಯಾಗಿ ಇರುತ್ತೆನೆ. ಈ ಕಷ್ಟದ ಸಮಯದಲ್ಲಿ, ನಾನು ಒಂಟಿಯಾಗಿ ಇರಲು ಬಯಸಿದ್ದು ನನ್ನ ಈ ನಿರ್ಧಾರಕ್ಕೆ ನೀವೆಲ್ಲರು ಒಪ್ಪಿ, ನೀವು ಇರುವ ಜಾಗದಿಂದಲೇ ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಿ ಆಶಿರ್ವದಿಸಿ ಎಂದು ಬರೆದುಕೊಂಡಿದ್ದಾರೆ.