ಮುಂಬೈ,ಮೇ 6(DaijiworldNews/AZM):ಅತ್ಯಾಚಾರ ಮಾಡಿ ವೀಡಿಯೋ ಮಾಡಿರುವ ಪ್ರಕರಣದ ಹಿನ್ನಲೆ ಹಿಂದಿ ಕಿರುತೆರೆಯ ನಟ ಕರಣ್ ಒಬೆರಾಯ್ ಅವರನ್ನು ಮುಂಬೈ ಓಶಿವಾರ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.
ಕರಣ್ ಮಹಿಳಾ ಜ್ಯೋತಿಷಿಯೊಬ್ಬರ ಜೊತೆಗಿದ್ದು, ಅವರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದರಲ್ಲದೆ, ಅವರ ಮೇಲೆ ಅತ್ಯಾಚಾರವೆಸಗಲಾಗಿದೆ. ಆಕೆಯ ಮೇಲೆ ಅತ್ಯಾಚಾರವೆಸಗಿದ ವೀಡಿಯೋ ಇಟ್ಟು ಆಕೆಗೆ ಬೆದರಿಕೆಯನ್ನು ನೀಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಅಕ್ಟೋಬರ್ 2016 ರಲ್ಲಿ ಡೇಟಿಂಗ್ ಸೈಟ್ ಮೂಲಕ ನಮ್ಮಿಬ್ಬರ ಪರಿಚಯವಾಗಿತ್ತು. ಸ್ನೇಹ, ಪ್ರೀತಿ ಬೆಳೆದು ಕರಣ್ ಮನೆಗೆ ಆಗಾಗ ಹೋಗಿ ಬರುತ್ತಿದ್ದೆ. ಒಂದು ದಿನ ಎಳನೀರಿನಲ್ಲಿ ಮತ್ತು ಬರುವಂಥ ಪದಾರ್ಥವನ್ನು ಹಾಕಿ ನಾನು ಪ್ರಜ್ಞೆ ತಪ್ಪುವಂತೆ ಮಾಡಿ, ನನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ. ನಂತರ ಮದುವೆಯಾಗುವೆ ಚಿಂತಿಸಬೇಡ ಎಂದು ಭರವಸೆ ನೀಡುತ್ತಾ ಕಾಲದೂಡುತ್ತಿದ್ದ. ಆದರೆ, ಭರವಸೆ ಹುಸಿಯಾಯಿತು. ಕಿರುಕುಳ ಅಧಿಕವಾಯಿತು. ಮೊದ ಮೊದಲು ಆತನ ಬೇಡಿಕೆ ಮನ್ನಿಸುತ್ತಿದ್ದೆ, ಆದರೆ, ನಂತರ ಅವನ ಕಿರುಕುಳ ಸಹಿಸಲು ಆಗಲಿಲ್ಲ, ಹೀಗಾಗಿ, ಪೊಲೀಸರ ನೆರವು ಕೇಳುತ್ತಿದ್ದೇನೆ ಎಂದು ತಮ್ಮ ದೂರಿನಲ್ಲಿ ಮಹಿಳೆ ಹೇಳಿಕೊಂಡಿದ್ದಾರೆ.