ನವದೆಹಲಿ, ಮೇ03(Daijiworld News/SS): ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಲೋಕಸಭಾ ಚುನಾವಣೆ ಫಲಿತಾಂಶದ ಮರುದಿನ ಮೇ 24ಕ್ಕೆ ಬಿಡುಗಡೆಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೀವನವನ್ನು ಆಧರಿಸಿದ ಈ ಸಿನಿಮಾ ಬಿಡುಗಡೆಗೆ ಇದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು ಸಿನಿಮಾ ಮೇ 24ರಂದು ಭಾರತ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗಲಿದೆ ಎಂದು ‘ಪಿಎಂ ನರೇಂದ್ರ ಮೋದಿ’ ಸಿನಿಮಾದ ನಿರ್ಮಾಪಕ ಸಂದೀಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಲೋಕಸಭೆಯ ಮೊದಲ ಹಂತದ ಮತದಾನ ನಡೆಯುವ ದಿನದಂದೇ ಪಿ.ಎಂ. ಮೋದಿ ಚಲನಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ ಅದಕ್ಕೂ ಒಂದು ದಿನ ಮೊದಲಷ್ಟೇ ಆಯೋಗವು ಮೋದಿ ಸಿನಿಮಾಗೆ ನಿರ್ಬಂಧ ಹೇರಿತ್ತು.
ನಿರ್ಮಾಪಕ ಸಂದೀಪ್ ಸಿಂಗ್ ಸಿನಿಮಾ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ನಿಲುವನ್ನು ಎತ್ತಿ ಹಿಡಿದು ಸಿನಿಮಾ ಬಿಡುಗಡೆ ತಡೆ ನೀಡಿತ್ತು.
ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮೇ 19ಕ್ಕೆ ಮುಗಿಯಲಿದೆ. 24ರಂದು ಸಿನಿಮಾ ಬಿಡುಗಡೆ ಮಾಡಲಿದ್ದು ಕೇವಲ ನಾಲ್ಕು ದಿನಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯ ನಡೆಸಬೇಕಿದೆ ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ. ನಟ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಮಂಗ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.