ಬೆಂಗಳೂರು, ಏ. 12 (DaijiworldNews/AA): ಸ್ಯಾಂಡಲ್ ವುಡ್ ನಲ್ಲಿ ಟಗರು ಪುಟ್ಟಿ ಎಂದೇ ಖ್ಯಾತಿ ಗಳಿಸಿರುವ ನಟಿ ಮಾನ್ವಿತಾ ಕಾಮತ್ ಅವರು ಮೇ 1 ಕ್ಕೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಹೌದು ನಟಿ ಮಾನ್ವಿತಾ ಅವರು ಅರುಣ್ ಎನ್ನುವವರ ಜೊತೆಗೆ ಸಪ್ತಪದಿ ತುಳಿಯುತ್ತಿದ್ದಾರೆ. ಈ ಬಗ್ಗೆ ಸ್ವತಃ ಮಾನ್ವಿತಾ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ.
ಇನ್ನು ಮಾನ್ವಿತಾ ಅವರು ಮದುವೆಯಾಗುತ್ತಿರುವ ಅರುಣ್ ಅವರು ಮೈಸೂರು ಮೂಲದವರಾಗಿದ್ದು, ಸಿನಿಮಾ ರಂಗಕ್ಕೆ ಹತ್ತಿರದವರೇ ಎಂದು ಹೇಳಲಾಗುತ್ತಿದೆ. ಏ. 30 ಕ್ಕೆ ಅರಶಿನ ಶಾಸ್ತ್ರ ನಡೆಯಲಿದ್ದು, ಮೇ 1 ಕ್ಕೆ ಈ ಜೋಡಿ ಹಸೆಮಣೆ ಏರಲಿದ್ದಾರೆ.
ಮಾನ್ವಿತಾ ಅವರು ಸೂರಿ ನಿರ್ದೇಶನದ ಕೆಂಡ ಸಂಪಿಗೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಬಳಿಕ ನಟಿಸಿದ ಟಗರು ಸಿನಿಮಾ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಆ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಟಗರು ಪುಟ್ಟಿ ಎಂದೇ ಖ್ಯಾತಿ ಗಳಿಸಿದರು.