ಮುಂಬೈ, ಏ 06 (DaijiworldNews/AA): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ಇದೀಗ ನಟಿ ಅದಾ ಶರ್ಮಾ ಅವರು ಖರೀದಿಸಿದ್ದಾರೆ.
ನಟ ಸುಶಾಂತ್ ಸಿಂಗ್ ಅವರು ಸಾಯುವ ಮುನ್ನ ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. 2020ರ ಜೂನ್ 14ರಂದು ತನ್ನ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಮನೆ ಖಾಲಿಯಾಗಿಯೇ ಉಳಿದುಕೊಂಡಿತ್ತು.
ಸುಶಾಂತ್ ಆತ್ಮಹತ್ಯೆಯ ಬಳಿಕ ಈ ಮನೆಯಲ್ಲಿ ಉಳಿಯಲು ಯಾರೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಮಾಲೀಕರು ಈ ಮನೆಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿದ್ದರು. ಬಳಿಕ ನಟಿ ಅದಾ ಶರ್ಮಾ ಅವರು ಈ ಮನೆಯನ್ನು ಖರೀದಿಸಿದ್ದರು.