ಮುಂಬೈ, ಮಾ 18(DaijiworldNews/AA): ನಟ ರಣವೀರ್ ಸಿಂಗ್ ಎಷ್ಟೇ ದೊಡ್ಡ ಸ್ಟಾರ್ ಆಗಿರಬಹುದು. ಆದರೆ ಶಕ್ತಿಮಾನ್ ಆಗಲಾರ ಎಂದು ನಟ ಮುಖೇಶ್ ಖನ್ನಾ ಹೇಳಿದ್ದಾರೆ.
ಭಾರತೀಯ ಕಿರುತೆರೆಯಲ್ಲಿ ಶಕ್ತಿಮಾನ್ ಧಾರವಾಹಿಯು ಸಾಕಷ್ಟು ಜನಪ್ರೀಯತೆಯನ್ನು ಗಳಿಸಿತ್ತು. ಜೊತೆಗೆ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ಮುಖೇಶ್ ಖನ್ನಾ ಅವರೂ ಜನರ ಮನಸ್ಸನ್ನ ಗೆದ್ದಿದ್ದರು. ಇದೀಗ ಅದೇ ಕಥೆಯನ್ನು ಅವರು ಸಿನಿಮಾ ಮಾಡಲು ಹೊರಟಿದ್ದು, ಈ ಸಿನಿಮಾದಲ್ಲಿ ಶಕ್ತಿಮಾನ್ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ ನಟ ರಣವೀರ್ ಸಿಂಗ್ ಅವರು ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಮುಖೇಶ್ ಖನ್ನಾ ಅವರು ತಾವು ಶಕ್ತಿಮಾನ್ ಪಾತ್ರಕ್ಕೆ ರಣವೀರ್ ಸಿಂಗ್ ಅವರನ್ನು ಆಯ್ಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಅವರು, ’ಶಕ್ತಿಮಾನ್ ಪಾತ್ರವನ್ನು ರಣವೀರ್ ಸಿಂಗ್ ಮಾಡುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿತ್ತು. ಇದ್ದರಿಂದ ಎಲ್ಲರೂ ಕೋಪಗೊಂಡಿದ್ದು, ನಾನು ಮೌನವಾಗಿದ್ದೆ. ಜೊತೆಗೆ ಮಾಧ್ಯಮಗಳು ಈ ಸಿನಿಮಾಗೆ ರಣವೀರ್ ಸಹಿ ಮಾಡಿದ್ದಾರೆ ಎಂದು ಪ್ರಸಾರ ಮಾಡಲು ಆರಂಭಿಸಿದವು. ಹೀಗಾಗಿ ನಾನು ಉತ್ತರ ನೀಡಲೇ ಬೇಕಾಯಿತು. ರಣವೀರ್ ಸಿಂಗ್ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ, ಅಂಥ ಇಮೇಜ್ ಇರುವ ವ್ಯಕ್ತಿ ಶಕ್ತಿಮಾನ್ ಆಗಲಾರ. ಮುಂದೇನಾಗುತ್ತೋ ನೋಡೋಣ’ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ನಟ ರಣವೀರ್ ಸಿಂಗ್ ಅವರು ಬೆತ್ತಲೆ ಫೋಟೋಶೂಟ್ ಮಾಡಿಸಿದ್ದರು. ಅದನ್ನು ಮುಖೇಶ್ ಖನ್ನಾ ಖಂಡಿಸಿದ್ದಾರೆ. ಈ ರೀತಿಯಾಗಿ ಬೆತ್ತಲೆಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವುದು ನಮ್ಮ ದೇಶದ ಸಂಸ್ಕೃತಿ ಅಲ್ಲ. ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಅಂತಹ ದೇಶಕ್ಕೆ ಹೋಗಲಿ. ಅಲ್ಲಿ ಪ್ರತಿ ಮೂರನೇ ಒಂದು ದೃಶ್ಯದಲ್ಲಿ ಬೆತ್ತಲೆಯಾಗಿ ನಟಿಸಬಹುದು. ಶಕ್ತಿಮಾನ್ ಎಂದರೆ ಕೇವಲ ಸೂಪರ್ ಹೀರೋ ಮಾತ್ರವಲ್ಲ. ಆತ ಸೂಪರ್ ಟೀಚರ್ ಕೂಡ. ಆ ಪಾತ್ರ ನಿರ್ವಹಿಸುವ ನಟನಿಗೆ ಅಂಥಹ ಗುಣವಿರಬೇಕು. ಆತ ಹೇಳಿದರೆ ಜನರು ಕೇಳುವಂತಿರಬೇಕು ಎಂದು ಹೇಳಿದ್ದಾರೆ.