ವಾರಣಾಸಿ, ಮಾ 03(DaijiworldNews/SK): ಸ್ಯಾಂಡಲ್ ವುಡ್ ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿರುವ ಇವರು ಇದೀಗ ಮತ್ತೆ ಟಾಲಿವುಡ್ನತ್ತ ಮುಖ ಮಾಡಿ ಜನಪ್ರಿಯ ನಟಿ, ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.
ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ‘ಓದೆಲ ರೈಲ್ವೆ ಸ್ಟೇಷನ್’ ತೆಲುಗು ಸಿನಿಮಾದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಇದೀಗ ಈ ಸಿನಿಮಾದ ಮುಂದುವರಿದ ಭಾಗ ತಯಾರಾಗುತ್ತಿದ್ದು, ಸಿನಿಮಾದಲ್ಲಿ ವಸಿಷ್ಠಗೆ ತಮನ್ನಾ ಭಾಟಿಯಾ ನಾಯಕಿಯಾಗಿದ್ದಾರೆ.
ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಓದೆಲಾ ರೈಲ್ವೆ ಸ್ಟೇಷನ್ ಪಾರ್ಟ್ 2 ಸಿನಿಮಾ, ದೂರದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಪತ್ನಿ ಹರಿಪ್ರಿಯಾ ಜತೆಗೆ ವಿಮಾನ ಏರಿದ್ದ ವಸಿಷ್ಠ ಸಿಂಹ, ಮುಹೂರ್ತದಲ್ಲೂ ಪಾಲ್ಗೊಂಡಿದ್ದಾರೆ.
ಇನ್ನು ‘ಓದೆಲ 2’ ಸಿನಿಮಾದ ಕತೆಯನ್ನು ಸಂಪತ್ ನಂದಿ ರಚಿಸಿದ್ದು ಸಿನಿಮಾದ ನಿರ್ದೇಶನವನ್ನು ಅಶೋಕ್ ತೇಜ ಮಾಡುತ್ತಿದ್ದಾರೆ. ಮಧು ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಡಿ ಮಧು ಬಂಡವಾಳ ಹೂಡಿದ್ದಾರೆ. ಸಿನಿಮಾದ ಬಹುತೇಕ ಭಾಗದ ಚಿತ್ರೀಕರಣ ವಾರಣಾಸಿಯಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.