ಬೆಂಗಳೂರು,ಏ27(Daijiworld News/AZM):ನಿರ್ಮಾಪಕ ಶಿವಶಂಕರ್ ಎಂಬುವವರಿಗೆ ಕನ್ನಡ ಚಿತ್ರನಟ ಸಾಧು ಕೋಕಿಲ ಹೆಸರಲ್ಲಿ ವಂಚನೆ ಮಾಡಿರುವ ಘಟನೆ ವರದಿಯಾಗಿದೆ.
ನಿರ್ಮಾಪಕರಾದ ಶಿವಶಂಕರ್ ರವರ ರಾವಣ ಎಂಬ ಸಿನಿಮಾದಲ್ಲಿ ಸಾಧು ಕೋಕಿಲಾರನ್ನು ನಟಿಸಲು ಕರೆದುಕೊಂಡು ಬರುವುದಾಗಿ ಹರಿಹರನ್ ಹಾಗೂ ಅವಿ ಎಂಬುವವರು ಹೇಳಿದ್ದರು. ಆದರೆ ಸಾಧುಕೋಕಿಲಾ ಅವರಿಗೆ ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ನೀಡಬೇಕಾಗುತ್ತದೆ ಎಂದು ಮಾತುಕತೆ ನಡೆದಿತ್ತು ಅದಕ್ಕೆ ನಿರ್ಮಾಪಕರು ಒಪ್ಪಿಕೊಂಡಿದ್ದರು. ನಂತರ ಅಡ್ವಾನ್ಸ್ ರೂಪದಲ್ಲಿ ಮೂವತ್ತೈದು ಸಾವಿರ ಪಡೆದುಕೊಂಡಿದ್ದರು. ಒಪ್ಪಂದದ ಪ್ರಕಾರ ಇದೇ ತಿಂಗಳ ಹದಿನೆಂಟನೆ ತಾರೀಖಿನಂದು ಹುಬ್ಬಳ್ಳಿಯಲ್ಲಿ ಎರಡು ಲಕ್ಷ ಖರ್ಚು ಮಾಡಿ ಶೂಟಿಂಗ್ಗೆ ನಿರ್ಮಾಪಕರು ತಯಾರಿ ಮಾಡಿಕೊಂಡಿದ್ದರು. ಆದರೆ ಶೂಟಿಂಗ್ ಸ್ಥಳಕ್ಕೆ ಸಾಧು ಕೋಕಿಲ ಬಂದಿರಲಿಲ್ಲ. ಆಗ ಹ್ಯಾಸನಟ ಹೆಸರು ಹೇಳಿ ವಂಚನೆ ಮಾಡಿದ್ದಾರೆಂದು ರಾವಣ ಚಿತ್ರದ ನಿರ್ಮಾಪಕ ಶಿವಶಂಕರ್ಗೆ ಗೊತ್ತಾಗಿದೆ.
ತಕ್ಷಣ ಇದರ ಬಗ್ಗೆ ತಿಳಿಯಲು ಸಾಧು ಕೋಕಿಲ ಅವರ ಬಳಿ ಪೋನಿನಲ್ಲಿ ಮಾತನಾಡಿದ್ದಾರೆ. ಆಗ ನಟ ಸಾಧು ಕೋಕಿಲ ವಿದೇಶದಲ್ಲಿದ್ದೇನೆ. ನಾನು ಯಾರ ಬಳಿಯು ಹೇಳಿಲ್ಲ ಹಣ ಕೂಡ ತೆಗೆದುಕೊಂಡಿಲ್ಲ ಅಂತ ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ವಂಚನೆ ಮಾಡಿರುವವರ ವಿರುದ್ಧ ಚಿತ್ರದ ನಿರ್ಮಾಪಕ ಶಿವಶಂಕರ್ ದೂರು ನೀಡಿದ್ದಾರೆ.