ಲಂಡನ್,ಫೆ 20 (DaijiworldNews/ AK): ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅಷ್ಟೇ ಅಲ್ಲದೇ, ಹಾಲಿವುಡ್ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ.
ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ಶೋಗಳಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಆದರೆ ವಿದೇಶದ ಕೆಲವು ಮಂದಿಗೆ ದೀಪಿಕಾ ಪಡುಕೋಣೆ ಯಾರೆಂಬುದೇ ಗೊತ್ತಿಲ್ಲ.ಬಾಫ್ಟಾ (BAFTA) ಸಮಾರಂಭದ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ದೀಪಿಕಾ ಪಡುಕೋಣೆ ಅವರ ಫೋಟೋಗಳು ವೈರಲ್ ಆಗಿದ್ದನ್ನು ಕಂಡು ವಿದೇಶದ ಕೆಲವು ನೆಟ್ಟಿಗರು ‘ಯಾರು ಇವರು’ ಎಂದು ಪ್ರಶ್ನಿಸಿದ್ದಾರೆ?
ಭಾನುವಾರ (ಫೆಬ್ರವರಿ 18) ಲಂಡನ್ನಲ್ಲಿ ಬಾಫ್ಟಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಅದರಲ್ಲಿ ದೀಪಿಕಾ ಪಡುಕೋಣೆ ಅವರು ಭಾಗಿಯಾಗಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಅವರು ಹೆಜ್ಜೆ ಹಾಕಿದ್ದಾರೆ. ಚೆಂದದ ಸೀರೆ ಧರಿಸಿ ಹೆಜ್ಜೆ ಹಾಕಿದ್ದಾರೆ. ವೇದಿಕೆಗೆ ಬಂದು ‘ಇಂಗ್ಲಿಷೇತರ ಅತ್ಯುತ್ತಮ ಸಿನಿಮಾ’ ವಿಭಾಗದ ಪ್ರಶಸ್ತಿಯನ್ನು ದೀಪಿಕಾ ಪಡುಕೋಣೆ ಅವರು ಪ್ರದಾನ ಮಾಡಿದ್ದಾರೆ.
ಬಾಫ್ಟಾದಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಅವರ ಫೋಟೋಗಳನ್ನು ನೋಡಿ ವಿದೇಶದ ಮಂದಿಗೆ ಅಚ್ಚರಿ ಆಗಿದೆ. ಅವರಿಗೆ ದೀಪಿಕಾ ಯಾರು ಎಂಬುದು ತಿಳಿದಿಲ್ಲ. ‘ಇವರು ಯಾರು ಎಂಬುದು ಗೊತ್ತಿಲ್ಲ. ಆದರೆ ಆ ಡ್ರೆಸ್ನಲ್ಲಿ ತುಂಬ ಚೆನ್ನಾಗಿ ಕಾಣುತ್ತಿದ್ದಾರೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅದಕ್ಕೆ ಉತ್ತರಿಸಿರುವ ದೀಪಿಕಾ ಪಡುಕೋಣೆ ಅಭಿಮಾನಿಗಳು, ‘ಇವರು ಭಾರತದ ಸೂಪರ್ ಸ್ಟಾರ್ ನಟಿ’ ಎಂದು ಕಮೆಂಟ್ ಮಾಡಿದ್ದಾರೆ.ಇವರ ಹೆಸರು ದೀಪಿಕಾ ಪಡುಕೋಣೆ. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಇವರು ತುಂಬ ಸುಂದರವಾಗಿದ್ದಾರೆ. ಫ್ಯಾಷನ್ ವಿಚಾರದಲ್ಲಿ ಇವರು ಯಾವಾಗಲೂ ಪರ್ಫೆಕ್ಟ್ ಎಂದು ದೀಪಿಕಾ ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ.