ಹೊಸದಿಲ್ಲಿ, ಎ26(Daijiworld News/SS): ಲೋಕಸಭೆ ಚುನಾವಣೆ ಮುಗಿಯುವವರೆಗೆ ಪಿಎಂ ನರೇಂದ್ರ ಮೋದಿ ಸಿನಿಮಾ ಪ್ರದರ್ಶನವನ್ನು ತಡೆ ಹಿಡಿಯುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದೆ.
ಚುನಾವಣಾ ಆಯೋಗವು ಸಿನಿಮಾ ವೀಕ್ಷಣೆ ಬಳಿಕ ಸುಪ್ರೀಂಗೆ ಸಲ್ಲಿಸಿದ್ದ ಆರು ಪುಟಗಳ ವರದಿಯಲ್ಲಿ, ಸಿನಿಮಾದಲ್ಲಿ ಪ್ರಧಾನಮಂತ್ರಿ ಪರವಾದ ಅಂಶಗಳಿದ್ದು, ವಿರೋಧ ಪಕ್ಷಗಳ ನಾಯಕರನ್ನು ಲಘುವಾಗಿ ತೋರಿಸಲಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಪ್ರಧಾನಿ ಮೋದಿ ಅವರ ಜೀವನ ಆಧಾರಿತ ಸಿನಿಮಾದ ನಿರ್ಮಾಪಕ ಸಂದೀಪ್ ವಿನೋದ್ ಕುಮಾರ್ ಸಿಂಗ್ ಅವರು ಆಯೋಗದ ವರದಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರಿದ್ದ ಪೀಠವು ಅದನ್ನು ವಜಾಮಾಡಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಅಂಶವುಳ್ಳ ಯಾವುದೇ ಸಿನಿಮಾ/ಬಯೋಪಿಕ್ಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಡುಗಡೆ ಮಾಡದಂತೆ ತಡೆ ನೀಡಬೇಕು ಎಂದು ಉಲ್ಲೇಖಿಸಿತ್ತು. ಮಾತ್ರವಲ್ಲದೆ, ಮುಂದಿನ ಆದೇಶ ಬರುವವರೆಗೂ ಸಿನಿಮಾ ಪ್ರದರ್ಶನ ಮಾಡದಂತೆ ನಿರ್ಮಾಪಕರಿಗೂ ನೋಟಿಸ್ ಸೂಚಿಸಿತ್ತು.
ಇದೀಗ ಸಿನಿಮಾ ಪ್ರದರ್ಶನವನ್ನು ತಡೆ ಹಿಡಿಯುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದೆ