ಚೆನೈ, ಫೆ 13 (DaijiworldNews/AA): ಧನುಷ್ ಹಾಡಿದ ‘ಕೊಲವೆರಿ ಡಿ’ ಹಾಡು ನನ್ನ ಸಿನಿಮಾವನ್ನೇ ನುಂಗಿ ಹಾಕಿತ್ತು ಎಂದು ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಐಶ್ವರ್ಯ ರಜನಿಕಾಂತ್ ನಿರ್ದೇಶಿಸಿರುವ ತ್ರಿ ಸಿನಿಮಾದಲ್ಲಿ ಧನುಷ್ ಹಾಗೂ ಶ್ರುತಿ ಹಾಸನ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತ್ರಿ ಸಿನಿಮಾವು ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಈ ಸಿನಿಮಾದ ಕೊಲವೆರಿ ಡಿ ಹಾಡು ಸೂಪರ್ ಹಿಟ್ ಆಗಿತ್ತು. ಆದರೆ ಹಿಟ್ ಆದ ಈ ಹಾಡಿನಿಂದಲೇ ಸಿನಿಮಾಗೆ ತೊಂದರೆಯಾಗಿದ್ದು, ಧನುಷ್ ಹಾಡಿದ ಕೊಲವೆರಿ ಡಿ ಹಾಡಿನಿಂದ ಯಾವುದೇ ಪ್ರಯೋಜನವಾಗಲಿಲ್ಲ. ಈ ಹಾಡು ನನ್ನ ಸಿನಿಮಾವನ್ನು ನುಂಗಿ ಹಾಕುವುದರ ಜೊತೆಗೆ ನನಗೆ ನಷ್ಟವಾಗಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಲವೆರಿ ಡಿ ಹಾಡು ಸೂಪರ್ ಹಿಟ್ ಆದ ಮೇಲೆ ಜನರ ನಿರೀಕ್ಷೆ ಹೆಚ್ಚಾಯಿತು. ನನ್ನ ಕಥೆಗೆ ಪ್ರಾಮುಖ್ಯತೆ ಇರುವಂತ ಸಿನಿಮಾಗಳನ್ನು ಮಾಡಿದೆ. ನಾನು ಹೇಳಲು ಪ್ರಯತ್ನಿಸಿದ ಕಥೆ ಜನರನ್ನು ತಲುಪಲಿಲ್ಲ. ಆದ್ದರಿಂದ ನಾನು ಮಾಡುವ ಚಿತ್ರಗಳಿಗೆ ಪೆಟ್ಟಾಯಿತು ಎಂದು ಹೇಳಿದರು.
ಐಶ್ವರ್ಯ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಸೋತಿದ್ದು, ಇದರ ಬೆನ್ನಲ್ಲೇ ಐಶ್ವರ್ಯ ತನ್ನ ಮಾಜಿ ಪತಿ ಕುರಿತು ನೀಡಿರುವ ಹೇಳಿಕೆ ವೈರಲ್ ಆಗಿದೆ.