ಬೆಂಗಳೂರು, ಫೆ 09 (DaijiworldNews/AA): ಲೈಗರ್ ಬ್ಯೂಟಿ ನಟಿ ಅನನ್ಯಾ ಪಾಂಡೆಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಕಡಿಮೆ ಇದ್ದರೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸದಾ ಬ್ಯುಸಿ ಆಗಿರುತ್ತಾರೆ.
ನಟ ಹಾಗೂ ನಟಿಯರು ತಮ್ಮ ಅಭಿಮಾನಿಗಳಿಗೆ ಪರಿಸರ ಪಾಠ ಹೇಳುವುದು ಸಾಮಾನ್ಯ. ಇದೀಗ ಈ ಸಾಲಿಗೆ ಅನನ್ಯಾ ಪಾಂಡೆ ಸಹ ಸೇರುತ್ತಿದ್ದು, ಮಾಡೆಲಿಂಗ್ ಮೂಲಕ ತನ್ನ ಅಭಿಮಾನಿಗಳಿಗೆ ನಟಿ ಅನನ್ಯಾ ಪಾಂಡೆ ಪರಿಸರ ಪಾಠ ಹೇಳಿದ್ದಾರೆ.
ಅನನ್ಯಾ ಪಾಂಡೆ ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರಿಸ್ ಕೌಚರ್ ವೀಕ್ ನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಕಪ್ಪು ಸ್ಕರ್ಟ್ ನಲ್ಲಿ ಚಿಟ್ಟೆ ಮಾದರಿಯ ಟಾಪ್ ಧರಿಸಿದ್ದರು. ಈ ಆಕರ್ಷಕ ಉಡುಪು ಧರಿಸುವ ಮೂಲಕ ಎಲ್ಲರ ಗಮನವನ್ನ ತನ್ನತ್ತ ಸೆಳೆದಿದ್ದರು. ಇನ್ನು ಅನನ್ಯಾ ಪಾಂಡೆ ಅವರು ಧರಿಸಿದ್ದ ಈ ಉಡುಪನ್ನು ವಿನ್ಯಾಸ ಮಾಡಿದ್ದು ಖ್ಯಾತ ಡಿಸೈನರ್ ರಾಹುಲ್ ಮಿಶ್ರಾ ಅವರು.
ಇನ್ನು ತಾನು ಧರಿಸಿದ್ದ ಉಡುಪಿನ ಮೂಲಕವೇ ಪರಿಸರ ಪಾಠ ಹೇಳಿದ ನಟಿ ಅನನ್ಯಾ ಪಾಂಡೆ, 'ಇದೊಂದು ಸೂಪರ್ ಹೀರೋ ಕಲ್ಪನೆ. ನಾವು ಕೀಟಗಳೊಂದಿಗೆ ಬದುಕುವ ಅವಶ್ಯಕತೆ ಇದೆ ಎನ್ನುವುದನ್ನು ನಮ್ಮ ಡಿಸೈನರ್ ತೋರಿಸಿಕೊಟ್ಟಿದ್ದಾರೆ. ಈ ಭೂಮಿಯಲ್ಲಿ ಕೇವಲ ಮಾನವ ಬದುಕಬೇಕೆಂದುಕೊಂಡು ಕೀಟಗಳ, ಸರಿಸೃಪಗಳ ಹೀಗೆ ಮುಂತಾದ ಪ್ರಾಣಿ-ಪಕ್ಷಿಗಳ ವಾಸಸ್ಥಾನಗಳನ್ನು ನಾಶಮಾಡುತ್ತಿದ್ದಾನೆ. ಇದು ಬಹಳ ದುಃಖಕರ ಸಂಗತಿಯಾಗಿದೆ' ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಮ್ಮ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.