ಮುಂಬೈ, ಫೆ 06 (DaijiworldNews/AA): ಬಾಲಿವುಡ್ ಬೆಡಗಿ ನಟಿ ಆಲಿಯಾ ಭಟ್ ನಟನಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಓರ್ವ ಪ್ರಭುದ್ಧ ನಟಿಯಾಗಿ ಗುರುತಿಸಿಕೊಂಡ ಆಲಿಯಾ ಭಟ್ ತಮ್ಮ ನಟನೆಗೆ ರಾಷ್ಟ್ರಪಶಸ್ತಿ ಕೂಡ ಪಡೆದುಕೊಂಡಿದ್ದಾರೆ. ಇದೀಗ ಆಲಿಯಾ ನಿರ್ಮಾಪಕಿಯಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪ್ರತಿಷ್ಠಿತ ಎಮ್ಮಿ ಅವಾರ್ಡ್ಸ್ ಪಡೆದುಕೊಂಡಿರುವ 'ಡೆಲ್ಲಿ ಕ್ರೈಂ' ವೆಬ್ ಸರಣಿ ನಿರ್ದೇಶಕ ರಿಚ್ಚಿ ಮೆಹ್ತಾ ಅವರು ಹೊಸ ಕ್ರೈಂ ಡ್ರಾಮಾವೊಂದನ್ನು ನಿರ್ದೇಶಿಸಲಿದ್ದಾರೆ. ಈ ಕ್ರೈಂ ಡ್ರಾಮಾಕ್ಕೆ ಆಲಿಯಾ ಭಟ್ ಬಂಡವಾಳ ಹೂಡುತ್ತಿದ್ದಾರೆ. ತಮ್ಮ ಎಟರ್ನಲ್ ಸನ್ ಶೈನ್ ನಿರ್ಮಾಣ ಸಂಸ್ಥೆಯ ಮೂಲಕ ಈ ಕ್ರೈಂ ಡ್ರಾಮಾವನ್ನು ನಿರ್ಮಾಣ ಮಾಡಲಿದ್ದು, ಇದಕ್ಕೆ 'ಪೋಚರ್' ಎಂದು ಹೆಸರು ಇಡಲಾಗಿದೆ.
ಪೋಚರ್ ವೆಬ್ ಸರಣಿಯ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ಆಲಿಯಾ, ಪೊಸ್ಟರ್ ಜೊತೆಗೆ 'ಕಾಡಿನ ಭೀಕರ ಮೌನ ಮಾರಣಾಂತಿಕ ಪಿತೂರಿಯೊಂದನ್ನು ಬಹಿರಂಗಪಡಿಸುತ್ತದೆ ಮತ್ತು ಬೇಟೆಗಾರನ ಬೇಟೆ ಪ್ರಾರಂಭವಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.
ಪೋಚರ್ ವೆಬ್ ಸರಣಿಯಲ್ಲಿ ಕೆಲ ಜನಪ್ರಿಯ ಕಲಾವಿದರು ನಟಿಸಲಿದ್ದು, ಈ ಡ್ರಾಮಾವು ಆನೆ ದಂತ ಕಳ್ಳಸಾಗಣೆ ಕುರಿತಾದ ಕತೆಯನ್ನು ಒಳಗೊಂಡಿರುತ್ತದೆ. ಈ ಡ್ರಾಮಾದಲ್ಲಿ ಭಾರತದ ಬೃಹತ್ ಆನೆ ದಂತ ಕಳ್ಳಸಾಗಣೆ ಜಾಲದ ಸಂಪೂರ್ಣ ಮಾಹಿತಿಯನ್ನು ತೆರೆ ಮೇಲೆ ತೋರಿಸಲಾಗುತ್ತದೆ. ಪೋಚರ್ ಡ್ರಾಮಾದಲ್ಲಿ ಮಲಯಾಳಂನ ಜನಪ್ರಿಯ ನಟಿ ನಿಮಿಷಾ ಸಜಯನ್, ನಟ ರೋಷನ್ ಮ್ಯಾಥ್ಯು, ದಿಬ್ಯೇಂದು ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೆಬ್ ಸರಣಿಯನ್ನು ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ.