ಕೋಲ್ಕತ್ತ,ಏ24(Daijiworld News/AZM):'ವಾಘಿನಿ-ಬೆಂಗಾಲ್ ಟೈಗ್ರೆಸ್' ತಮ್ಮ ಜೀವನಧಾರಿತ ಚಲನಚಿತ್ರ ಎನ್ನುತ್ತಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಎಚ್ಚರಿಕೆ ನೀಡಿದ್ದಾರೆ.
'ವಾಘಿನಿ-ಬೆಂಗಾಲ್ ಟೈಗ್ರೆಸ್' ಚಿತ್ರದಲ್ಲಿ ಸಾಮಾನ್ಯ ಬಾಲಕಿಯೊಬ್ಬಳು ರಾಜ್ಯದ ಮುಖ್ಯಮಂತ್ರಿಯಾಗುವ ಕಥೆಯನ್ನು ಹೇಳಲಾಗಿದೆ.ಹಾಗೂ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿದ್ದು, ಈ ಚಿತ್ರವು ಮಮತಾ ಬ್ಯಾನರ್ಜಿ ಅವರ ಜೀವನಚರಿತ್ರೆಯನ್ನು ಆಧರಿಸಿದೆ. ಹೀಗಾಗಿ ಚಿತ್ರ ಬಿಡುಗಡೆಯಾಗದಂತೆ ನಿರ್ಬಂಧ ಹೇರಬೇಕು ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಆ ಚಿತ್ರದ ಟ್ರೈಲರ್ ಅನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆಯುವಂತೆ ಪಶ್ಚಿಮ ಬಂಗಾಳ ಮುಖ್ಯ ಚುನಾವಣಾ ಅಧಿಕಾರಿಗೆ ಚುನಾವಣಾ ಆಯೋಗವು ಸೂಚಿಸಿದೆ.
ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಸಹ ಟ್ವೀಟ್ ಮಾಡಿದ್ದಾರೆ. 'ಯಾವ ಚಿತ್ರಕ್ಕೂ ನನಗೂ ಸಂಬಂಧವಿಲ್ಲ. ಯಾರೋ ಯುವಜನರು ಕಥೆ ಸಂಗ್ರಹಿಸಿ, ಚಿತ್ರ ನಿರ್ಮಿಸಿದ್ದಾರೆ. ಅದಕ್ಕೆ ನಾನು ಹೇಗೆ ಹೊಣೆ ಆಗುತ್ತೇನೆ. ನಾನು ನರೇಂದ್ರ ಮೋದಿ ಅಲ್ಲ. ಆ ಚಿತ್ರಕ್ಕೂ ನನಗೂ ಸಂಬಂಧವಿದೆ ಎನ್ನುತ್ತಿರುವವರು ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ' ಎಂದು ಅವರು ಹೇಳಿದ್ದಾರೆ.