ಮುಂಬೈ, ಜ 19(DaijiworldNews/AA): ಇತ್ತೀಚೆಗೆ ಬಿಡುಗಡೆಯಾದ ನಟಿ ನಯನತಾರಾ ಅಭಿನಯದ ’ಅನ್ನಪೂರ್ಣಿ’ ಸಿನಿಮಾದಲ್ಲಿ ರಾಮನ ಬಗ್ಗೆ ಹಾಗೂ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನಟಿ ನಯನತಾರಾ ಅವರು ಕ್ಷಮೆಯಾಚಿಸಿದ್ದಾರೆ.
ಸಿನಿಮಾ ಮಾಡುವುದೆಂದರೆ ಕೇವಲ ಆರ್ಥಿಕ ಲಾಭಕ್ಕಾಗಿ ಮಾತ್ರವಲ್ಲ. ಸಮಾಜಕ್ಕೆ ಒಂದು ಸಂದೇಶ ತಿಳಿಸುವ ಉದ್ದೇಶವೂ ಇರುತ್ತದೆ. ‘ಅನ್ನಪೂರ್ಣಿ’ ಚಿತ್ರವನ್ನು ನಿಷ್ಕಲ್ಮಶ ಮನಸ್ಸಿನಿಂದ ಮಾಡಲಾಗಿದೆ. ನಮ್ಮ ನಿಜ ಜೀವನದಲ್ಲಿ ಏನೆಲ್ಲ ನಡೆಯುತ್ತಿದೆಯೋ ಅದನ್ನ ತೋರಿಸುವುದೇ ಈ ಸಿನಿಮಾ ಉದ್ದೇಶ ಎಂದು ನಟಿ ನಯನತಾರ ತಿಳಿಸಿದ್ದಾರೆ.
ಸಕಾರಾತ್ಮಕ ಸಂದೇಶ ಹಂಚಿಕೊಳ್ಳುವಂತಹ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಗೊತ್ತಿಲ್ಲದೆ ನಾವು ನಿಮ್ಮ ಭಾವನೆಗಳಿಗೆ ನೋವುಂಟುಮಾಡಿದ್ದೇವೆ. ಸೆನ್ಸಾರ್ ಗೆ ಒಳಪಟ್ಟು, ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾವನ್ನು ಒಟಿಟಿಯಿಂದ ತೆಗೆದುಹಾಕುವುದನ್ನು ನಾವು ನಿರೀಕ್ಷಿಸಿರಲಿಲ್ಲ. ಯಾರ ಭಾವನೆ ಅಥವಾ ನಂಬಿಕೆಗೆ ಧಕ್ಕೆ ತರುವುದು ನನ್ನ ಹಾಗೂ ತಂಡದ ಉದ್ದೇಶವಾಗಿರಲಿಲ್ಲ ಎಂದು ನಟಿ ಬರೆದುಕೊಂಡಿದ್ದಾರೆ.
ನಾನು ದೇವರನ್ನು ಸಂಪೂರ್ಣವಾಗಿ ನಂಬುತ್ತೇನೆ ಹಾಗೂ ದೇಶಾದ್ಯಂತ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಯಾರ ಭಾವನೆಗಳಿಗಾದರೂ ನೋವುಂಟು ಮಾಡಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.