ಮುಂಬೈ, ಜ 14(DaijiworldNews/SK): ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಪುತ್ರಿ ಇರಾ ಖಾನ್ - ನೂಪುರ್ ಶಿಖರೆ ಜೋಡಿ ಜ.10 ರಂದು ಸಪ್ತಪದಿ ತುಳಿದಿದ್ದರು. ಇದೀಗ ಮುಂಬೈನ ಪ್ರತಿಷ್ಟಿತ ರೆಸಾರ್ಟ್ವೊಂದರಲ್ಲಿ ಅದ್ದೂರಿ ಆರತಕ್ಷತೆ ಕೂಡ ಆಯೋಜಿಸಿದ್ದು, ಈ ಸಮಾರಂಭಕ್ಕೆ ಹಲವು ಸಿನಿಮಾ ಸ್ಟಾರ್ಸ್ ಭಾಗಿಯಾಗಿ ಎಲ್ಲರ ಗಮನ ಸೆಳೆದರು.
ಜನವರಿ 3 ರಂದು ಮುಂಬೈಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದ ಇರಾ ಖಾನ್-ನೂಪುರ್ ಶಿಖರೆ ಜೋಡಿ ಉದಯಪುರದಲ್ಲಿ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆಯ ಬಳಿಕ ಮುದ್ದಿನ ಮಗಳ ಆರತಕ್ಷತೆಯನ್ನು ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಗ್ರ್ಯಾಂಡ್ ಆಗಿ ಹಮ್ಮಿಕೊಂಡಿದ್ದಾರೆ. ಈ ಆರತಕ್ಷತೆಯಲ್ಲಿ ನೂಪುರ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೆ, ಇರಾ ಕೆಂಪು ಲೆಹೆಂಗಾ ಧರಿಸಿ ಮಿಂಚಿದ್ದಾರೆ.
ಅರಕ್ಷತೆಯಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ರಣ್ಬೀರ್ ಕಪೂರ್, ಕತ್ರಿನಾ ಕೈಫ್, ಜಯಾ ಬಚ್ಚನ್, ಸುಶ್ಮಿತಾ ಸೇನ್, ತೆಲುಗು ನಟ ನಾಗಚೈತನ್ಯ, ಫರ್ಹಾನ್ ಅಖ್ತರ್, ಜೆನಿಲಿಯಾ ದೇಶ್ಮುಖ್, ಅದಿತಿ- ಸಿದ್ಧಾರ್ಥ್ ಜೋಡಿ, ಅನಿಲ್ ಕಪೂರ್, ಹೇಮಾ ಮಾಲಿನಿ, ರೇಖಾ ಸೇರಿದಂತೆ ಅನೇಕ ಬಾಲಿವುಡ್ ಸ್ಟಾರ್ಸ್ ಗಳು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದಾರೆ.