ಮುಂಬೈ, ಜ 10(DaijiworldNews/AK): ಬಿಲ್ಕಿಸ್ ಬಾನು ಪ್ರಕರಣವನ್ನು ಆಧರಿಸಿದ ಚಿತ್ರಕ್ಕಾಗಿ ನನ್ನ ಬಳಿ ಸ್ಕ್ರಿಪ್ಟ್ ಸಿದ್ಧವಾಗಿದೆ. ಆದರೆ, ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋದಿಂದ ಬೆಂಬಲವಿಲ್ಲದ ಕಾರಣ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ.
2002ರ ಗುಜರಾತ್ ಗಲಭೆಯಲ್ಲಿ ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ, ಆಕೆಯ ಕುಟುಂಬವನ್ನು ಕೊಂದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಅಸಿಂಧುಗೊಳಿಸಿದೆ.
ಕಂಗನಾ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು ಕಂಗನಾ ಮೇಡಂ, ಮಹಿಳಾ ಸಬಲೀಕರಣದ ಬಗ್ಗೆ ನಿಮ್ಮ ಉತ್ಸಾಹವು ತುಂಬಾ ಉತ್ತೇಜನಕಾರಿಯಾಗಿದೆ! ಬಿಲ್ಕಿಸ್ ಬಾನು ಅವರ ಕಥೆಯನ್ನು ಬಲಿಷ್ಠ ಸಿನಿಮಾ ಮೂಲಕ ಹೇಳಲು ನೀವು ನಿಜವಾಗಿಯೂ ಆಸಕ್ತಿ ಹೊಂದಿದ್ದೀರಾ? ನೀವು ಮಾಡುತ್ತೀರಾ ನೀವು ಸಿನಿಮಾವನ್ನು ಬಿಲ್ಕಿಸ್ ಬಾನುಗಾಗಿ, ಸ್ತ್ರೀವಾದಕ್ಕಾಗಿ ಅಥವಾ ಕನಿಷ್ಠ ಮಾನವೀಯತೆಗಾಗಿಯಾದರೂ ಸಿನಿಮಾ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಬಹಳ ದಿನಗಳಿಂದ ಇಂತಹ ಸಿನಿಮಾ ಮಾಡಬೇಕೆಂದುಕೊಂಡಿದ್ದೆ ಆದರೆ ಯಾರಿಂದಲೂ ಬೆಂಬಲ ಸಿಗದಿರುವುದೇ ಈ ಸಿನಿಮಾ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಎಂದು ನಟಿ ಹೇಳಿದ್ದಾರೆ.
ನೆಟ್ಫ್ಲಿಕ್ಸ್, ಪ್ರೈಮ್ ವೀಡಿಯೋ ಮತ್ತು ಇತರ ಸ್ಟುಡಿಯೋಗಳು ರಾಜಕೀಯ ಪ್ರೇರಿತ ಚಲನಚಿತ್ರಗಳನ್ನು ಮಾಡಬಾರದೆಂದು ಸ್ಪಷ್ಟ ಮಾರ್ಗಸೂಚಿಗಳನ್ನು ಹೊಂದಿರುವುದಾಗಿ ನನಗೆ ತಿಳಿಸಿದವು' ಎಂದು ಕಂಗನಾ ಬರೆದಿದ್ದಾರೆ.