ಬೆಂಗಳೂರು, ಡಿ 03 (DaijiworldNews/AK): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ಫೆಬ್ರವರಿ 29 ರಿಂದ ಮಾರ್ಚ್ 7 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಏರ್ಪಡಿಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಜರುಗಿದ ಸಂಘಟನಾ ಸಮಿತಿ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 15 ನೇ ಆವೃತ್ತಿಯನ್ನು ಫೆಬ್ರವರಿ 29 ರ ಸಂಜೆ ಉದ್ಘಾಟನೆಯನ್ನು ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಲಾಗಿದೆ ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದ್ದು, ವಿದೇಶಿ ಚಿತ್ರಗಳನ್ನು ಪ್ರದರ್ಶೀಸಲಾಗುವುದಲ್ಲದೆ, ಕನ್ನಡ ಸೇರಿದಂತೆ ದೇಶದ ವಿವಿಧ ಭಾಷಾ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಮಾರ್ಚ್ 7 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಅಂದು ರಾಜ್ಯಪಾಲರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ಸಂಘಟನಾ ಸಮಿತಿ ಸಭೆಯ ಜೊತೆಗೆ ಕೋರ್ ಸಮಿತಿಯೂ ರಚನೆಯಾಗಿದ್ದು, ಸಮಾರಂಭ ಯಾವ ರೀತಿ ಏರ್ಪಡಿಸಬೇಕೆಂದು ತೀರ್ಮಾನವಾಗುತ್ತದೆ. ಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ.
ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಹಿಂದೆ ವಿಧಾನಸೌಧದ ಮುಂಭಾಗದಲ್ಲಿಯೇ ಅಂತರರಾಷ್ಟ್ರಿಯ ಚಲನಚಿತ್ರೋತ್ಸವದ ಉದ್ಘಾಟನೆಯಾಗುತ್ತಿತ್ತು. ದೇಶವಿದೇಶದ ಸಿನಿರಂಗದ ಪ್ರಖ್ಯಾತ ಕಲಾವಿದರನ್ನು ಕರೆಸಲಾಗುತ್ತಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತರರಾಷ್ಟ್ರಿಯ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.