ಬೆಂಗಳೂರು, 31 (DaijiworldNews/MR): ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಟ್ವಿಟ್ಟರ್ ಪೋಸ್ಟ್, ವಿಡಿಯೋಗಳ ಮೂಲಕ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರುತ್ತಾರೆ. ಅಧ್ಯಾತ್ಮ, ಸಿನಿಮಾ, ಆರೋಗ್ಯ, ತಮ್ಮ ವೈಯಕ್ತಿಕ ಜೀವನ, ಕುಟುಂಬ ಇನ್ನಿತರೆ ಹಲವು ವಿಷಯಗಳ ಬಗ್ಗೆ ಹಲವು ವಿಷಯಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಜಗ್ಗೇಶ್ ಹೊಸದೊಂದು ವಿಡಿಯೋ ಅಪ್ಲೋಡ್ ಮಾಡಿದ್ದು, ಅನಾರೋಗ್ಯದ ನಡುವೆಯೂ ಜಗ್ಗೇಶ್, ಜನರಲ್ಲಿ ಒಂದು ಮನವಿ ಮಾಡಿದ್ದಾರೆ.
ಜ್ವರ, ಕೆಮ್ಮು, ನಗೆಡಿ ಇಂಥಹುಗಳೇನಾದರೂ ಇದ್ದರೆ ದಯವಿಟ್ಟು ಮನೆಯಲ್ಲಿ ಇದ್ದು ಚಿಕಿತ್ಸೆ ಪಡೆದುಕೊಳ್ಳಿ, ಅನಾರೋಗ್ಯ ಇದ್ದರೂ ಸಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇತರರಿಗೂ ಅನಾರೋಗ್ಯವನ್ನು ಹರಡಬೇಡಿ. ಮಾಸ್ಕ್ ಹಾಕಿಕೊಳ್ಳಿ, ನಿಮ್ಮ ಆರೋಗ್ಯದ ಜೊತೆಗೆ ಬೇರೆಯವರ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಿ ಎಂದಿದ್ದಾರೆ.
ನನ್ನನ್ನು ಸಂಗೀತಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅಲ್ಲಿ ಸಾಕಷ್ಟು ಜನ ಭಾಗಿಯಾಗಿದ್ದರು. ತುಂಬಾ ಜನ ಪ್ರೀತಿಯಿಂದ ಫೋಟೊ ತೆಗೆಸಿಕೊಳ್ಳಲು ಬಂದರು. ಬೇಡ ಅಂದರೆ ಬೇಜಾರು ಮಾಡಿಕೊಳ್ಳುತ್ತಾರೆ, ಮಾಸ್ಕ್ ಹಾಕಿಕೊಂಡು ಫೋಟೊಕ್ಕೆ ಫೋಸು ನೀಡಿದರೆ ದುರಹಂಕಾರ ಅಂದುಕೊಳ್ಳುತ್ತಾರೆ ಎಂದು ಮಾಸ್ಕ್ ತೆಗೆದು ಮಾಮೂಲಿಯಾಗಿ ಫೋಟೊ ತೆಗೆಸಿಕೊಂಡೆ.
ಯಾರೋ ಪುಣ್ಯಾತ್ಮರು ನನಗೆ ಅನಾರೋಗ್ಯ ಗಿಫ್ಟ್ ಕೊಟ್ಟಿದ್ದಾರೆ. ಏಳು ದಿನವಾಯ್ತು ಅನಾರೋಗ್ಯಕ್ಕೆ ಈಡಾಗಿ, ಬೆಡ್ನಿಂದ ಏಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರೇ ಆಗಲಿ ಆರೋಗ್ಯ ಸರಿಯಿಲ್ಲದೇ ಇದ್ದರೆ ದಯವಿಟ್ಟು ಮನೆಯಲ್ಲಿ ಇರಿ, ದಯವಿಟ್ಟು ಜವಾಬ್ದಾರಿಯುತವಾಗಿ ವರ್ತಿಸಿ ಎಂದು ಮನವಿ ಮಾಡಿದ್ದಾರೆ.