ಮುಂಬೈ, ಡಿ 25 (DaijiworldNews/MR): ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ಡಿ.24ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಅರ್ಬಾಜ್ ಖಾನ್ ಮದುವೆ ನಡೆದಿದೆ, ಮುಂಬೈನಲ್ಲಿರುವ ಅರ್ಬಾಜ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ಅವರ ವಿವಾಹ ನಡೆದಿದೆ.
ಇದೀಗ ಅರ್ಬಾಜ್ ಖಾನ್ ಪತ್ನಿ ಶುರಾ ಖಾನ್ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ರವೀನಾ ಟಂಡನ್ ಹಾಗೂ ಅವರ ಮಗಳು ರಾಶಾ ಥಡಾನಿ ಅವರ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಶುರಾ ಖಾನ್ ಅವರು ‘ಪಾಟ್ನಾ ಶುಕ್ಲಾ’ ಸಿನಿಮಾದಲ್ಲಿ ಅರ್ಬಾಜ್ ಖಾನ್ ಜೊತೆ ನಟಿಸಿದ್ದಾರೆ.
ಅರ್ಬಾಜ್ ಖಾನ್ ಅವರಿಗೆ ಇದು ಎರಡನೇ ಮದುವೆ 1998ರಲ್ಲಿ ಮಲೈಕಾ ಅರೋರಾ ಜೊತೆ ಅರ್ಬಾಜ್ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ.
ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಇದೆ ಎಂದು ಹೇಳಲಾಗುತ್ತಿದೆ.