ಹೈದ್ರಾಬಾದ್, ಡಿ 01 (DaijiworldNews/AA): 'ನ್ಯಾಶನಲ್ ಕ್ರಶ್' ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬೆಲ್ಲ ವದಂತಿಗಳು ಹರಿದಾಡುತ್ತಲೇ ಇದ್ದು, ಇತ್ತ ಈ ಸುದ್ದಿಗೆ ಪುಷ್ಟಿ ನೀಡುವಂತಹ ಸಾಕ್ಷಿಗಳು ಸಿಕ್ಕಿವೆ. ಆದರೆ ಈ ಜೋಡಿ ಮಾತ್ರ ತಾವು ಪ್ರೀತಿ ಮಾಡುತ್ತಿರುವುದಾಗಿ ಅಧಿಕೃತವಾಗಿ ಬಂಹಿರಂಗಪಡಿಸಿಲ್ಲ. ಇದೀಗ ರಶ್ಮಿಕಾ ಮತ್ತು ವಿಜಯ್ ಅವರು ಒಂದೇ ರೀತಿಯ ಡ್ರೆಸ್ ಧರಿಸಿರುವುದು ಇವರಿಬ್ಬರ ಪ್ರೀತಿಗೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.
ಹೌದು.. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಆಗಾಗ ಒಂದೇ ರೀತಿಯ ಬಟ್ಟೆ ಧರಿಸಿಕೊಂಡು ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಇವರಿಬ್ಬರು ಮತ್ತೆ ಒಂದೇ ರೀತಿಯ ಬಟ್ಟೆ ಧರಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ರೌಡಿ ಎಂಬ ಬ್ರ್ಯಾಂಡ್ ನ ಡ್ರೆಸ್ ಇದಾಗಿದ್ದು, ರಶ್ಮಿಕಾ ಅವರು ಈ ಡ್ರೆಸ್ ಧರಿಸಿಕೊಂಡು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ವಿಜಯ್ ದೇವರಕೊಂಡ ಅವರು ತೆಲಂಗಾಣದಲ್ಲಿ ಮತದಾನ ಮಾಡಲು ಈ ಡ್ರೆಸ್ ಧರಿಸಿಕೊಂಡು ಬಂದಿದ್ದರು. ಸದ್ಯ ಇವೆರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಾಮಾನ್ಯವಾಗಿ ಪ್ರೇಮಿಗಳು, ಮದುವೆಯಾದ ನವಜೋಡಿಗಳು ಒಂದೇ ರೀತಿಯ ಡ್ರೆಸ್ ಧರಿಸುತ್ತಾರೆ. ಇದೇ ರೀತಿ ರಶ್ಮಿಕಾ ಹಾಗೂ ವಿಜಯ್ ಅವರು ಒಂದೇ ರೀತಿಯ ಡ್ರೆಸ್ ಧರಿಸಿದ್ದಾರಾ ಎಂಬ ಪ್ರಶ್ನೆ ಎಲ್ಲಾ ಅಭಿಮಾನಿಗಳಲ್ಲಿ ಮೂಡಿದೆ. ಅದೇ ರೀತಿ ರಶ್ಮಿಕಾ ಹಾಗೂ ವಿಜಯ್ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಅಭಿಮಾನಿಗಳು ಕೋರಿಕೆಯಾಗಿದೆ.