ಬೆಂಗಳೂರು, ನ 27(DaijiworldNews/Ak): ಮಳೆ ಹುಡುಗಿ ಖ್ಯಾತಿಯ ನಟಿ ಪೂಜಾ ಗಾಂಧಿ . ಸ್ವತಃ ತಮ್ಮದೇ ಕೈ ಬರಹದಲ್ಲಿ ಮದುವೆ ಕಾರ್ಡ್ ಸಿದ್ಧ ಪಡಿಸಿ ಎಲ್ಲರಿಗೂ ಕಳುಹಿಸಿದ್ದಾರೆ.
ಉತ್ತರ ಪ್ರದೇಶದವರಾದ ಪೂಜಾ ಗಾಂಧಿ, ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಬಂದವರು. ಕನ್ನಡವೇ ಬಾರದ ಪೂಜಾ ಇದೀಗ ಸ್ವಚ್ಛ ಕನ್ನಡದಲ್ಲಿ ಮಾತನಾಡುತ್ತಾರೆ. ತಮ್ಮದೇ ಕೈ ಬರಹದಲ್ಲಿ ಕನ್ನಡದ ಮದುವೆ ಆಮಂತ್ರಣ ಪತ್ರಿಕೆಯನ್ನು ಸಿದ್ಧ ಮಾಡಿದ್ದಾರೆ. ಈ ನಡೆಗೆ ಕನ್ನಡಿಗರಿ ಮೆಚ್ಚಿದ್ದಾರೆ. ಆ ಪತ್ರಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಹಿಂದೆ ನಿಶ್ಚಾತಾರ್ಥ ಮುರಿದು ಬಿದ್ದ ಕಾರಣದಿಂದಾಗಿ ಮದುವೆಯನ್ನೇ ಮರೆತಿದ್ದ ಪೂಜಾ ಗಾಂಧಿ, ಇದೀಗ ಎಲ್ಲ ಕಹಿ ಘಟನೆಗಳನ್ನು ಮರೆತು ಮತ್ತೆ ಹಸಮಣೆ ಏರುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದಲೂ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದರೆ.
ಮಳೆ ಹುಡುಗಿ ಪೂಜಾ ಗಾಂಧಿ ನಾಳೆ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಆಪ್ತರು ಹೇಳುವಂತೆ ನಾಳೆ ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ. ಅದೀಗ ಎಲ್ಲವೂ ನಿಜವಾಗಿದೆ. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ತಮ್ಮ ಮದುವೆ ಕುರಿತಾಗಿ ಪತ್ರ ಬರೆದಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ.