ಹೈದರಾಬಾದ್, ನ. 9 ( DaijiworldNews/SK): ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ರುತ್ ಪ್ರಭು ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿರುವ ಚೆಲುವೆ. ಈಗಾಗಲೇ ವಿವಿಧ ಸಂದರ್ಶನಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ 'ಮಯೋಸಿಟಿಸ್'ನಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡಿರುವ ನಟಿ ಸಮಂತಾ ರುತ್ ಪ್ರಭು ಅವರು ಕಳೆದ ಎರಡು ವರ್ಷಗಳಲ್ಲಿ ಎದುರಿಸಿದ ವೈಯಕ್ತಿಕ ಮತ್ತು ವೃತ್ತಿಜೀವನದ ಸವಾಲುಗಳ ಕುರಿತು ಹಾರ್ಪರ್ ಬಜಾರ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸಮಂತಾ ರುತ್ ಪ್ರಭು ತಮ್ಮ ಜೀವನದ ಕಹಿ ಘಟನೆಗಳನ್ನು ನೆನಪಿಸಿಕೊಂಡರು. ದಾಂಪತ್ಯ ಜೀವನ ಅಂತ್ಯಗೊಂಡ ಸಂದರ್ಭ ಆರೋಗ್ಯ ಹದಗೆಟ್ಟಿತು. ಇದರ ಜೊತೆಗೆ ಸಿನಿ ವೃತ್ತಿಜೀವನಕ್ಕೂ ಹಿನ್ನಡೆಯಾಗಿತ್ತು. ಎಲ್ಲಾ ಸಮಸ್ಯೆಗಳೂ ಒಂದೇ ಬಾರಿ ನನ್ನ ಮೇಲೆ ಅಪ್ಪಳಿಸಿತ್ತು ಎಂದು ತಿಳಿಸಿದರು.
ಈ ದೇಶದಲ್ಲಿ ಜನರು ಪ್ರೀತಿಸುವಂತಹ ಸ್ಟಾರ್ ಆಗುವುದು ಸುಲಭದ ಮಾತಲ್ಲ ಅದೊಂದು ನನಗೆ ಬಹುದೊಡ್ದ ಉಡುಗೊರೆ. ಅಭಿಮಾನಿಗಳ ಪ್ರೀತಿಗೆ ನಾನೆಂದು ಚಿರಋಣಿಯಾಗಿರುತ್ತೇನೆ. ಕಳೆದ 2 ವರ್ಷಗಳಲ್ಲಿ ಬೇರೆ ನಟ-ನಟಿಯರ ಬಗ್ಗೆ ನಾನು ಓದಿ ತಿಳಿದುಕೊಂಡೆ. ಅನಾರೋಗ್ಯಕ್ಕೆ ಒಳಗಾಗಿ, ಟ್ರೋಲ್ ಗೆ ಒಳಗಾಗಿ ಮತ್ತೆ ಕಮ್ಬ್ಯಾಕ್ ಮಾಡಿದ ಕಲಾವಿದರ ಸಾಧನೆಯ ಕಥೆಗಳನ್ನು ತಿಳಿದು ನಾನು ಸ್ಪೂರ್ತಿ ಪಡೆದುಕೊಂಡಿದ್ದೇನೆ. ಮತ್ತು ಯಶಸ್ಸನ್ನು ಕೇವಲ ಬಾಕ್ಸ್ ಆಫೀಸ್ ಹಿಟ್ಗಳು, ಪ್ರಶಸ್ತಿಗಳು, ಪರ್ಫೆಕ್ಟ್ ಫಿಸಿಕಲ್ ಲುಕ್ ಅಥವಾ ಫ್ಯಾಷನ್ನಿಂದ ಮಾತ್ರ ತೂಗಬಾರದು. ಬದಲಿಗೆ ಹೋರಾಟ, ಕಷ್ಟ ಮತ್ತು ಜೀವನದಲ್ಲಿನ ಏರಿಳಿತಗಳು ನಮ್ಮನ್ನು ಗಟ್ಟಿಯಾಗಿಸುತ್ತವೆ ಎಂದು ತಿಳಿಸಿದ್ದಾರೆ.
ಸಮಂತಾ ರುತ್ ಪ್ರಭು ಹಾಗೂ ನಾಗ ಚೈತನ್ಯ ಜೋಡಿ 2017ರ ಅಕ್ಟೋಬರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಮಾರು ನಾಲ್ಕು ವರ್ಷಗಳ ನಂತರ, 2021ರ ಅಕ್ಟೋಬರ್ನಲ್ಲಿ ತಾವು ಬೇರ್ಪಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಫ್ಯಾನ್ಸ್ ಗಳಿಗೆ ಬಿಗ್ ಶಾಕ್ ನೀಡಿದ್ದರು. ಇದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.