ನವದೆಹಲಿ,ಏ 10(MSP): ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ರಿಲೀಸ್ಗೆ ಮತ್ತೆ ವಿಘ್ನ ಉಂಟಾಗಿದೆ. ನಿಗದಿಯಂತೆ ಏಪ್ರಿಲ್ 11 ರಂದು (ನಾಳೆ) ರಿಲೀಸ್ ಆಗಬೇಕಾಗಿರುವ ಸಿನಿಮಾಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ವ್ಯಕ್ತಿಗಳ ಯಾವುದೇ ಜೀವನಾಧಾರಿತ ಚಿತ್ರ ಬಿಡುಗಡೆಗೆ ಅವಕಾಶ ಇಲ್ಲ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವರೆಗೂ ಸಿನಿಮಾ ಬಿಡುಗಡೆ ಮಾಡಬಾರದು ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ಲೋಕಸಭಾ ಚುನಾವಣೆ ಮುಗಿಯುವರೆಗೂ ಸಿನಿಮಾ ರಿಲೀಸ್ ಮಾಡಬಾರದು ಎಂದು ಆಯೋಗಕ್ಕೆ ವಿಪಕ್ಷಗಳು ದೂರು ನೀಡಿತ್ತು. ಪ್ರಧಾನಿ ಮೋದಿಯ ಬಯೋಪಿಕ್ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರವಷ್ಟೇ ತಿರಸ್ಕರಿಸಿತ್ತು. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರವನ್ನು ನೀಡಿಲ್ಲ. ಹೀಗಾಗಿ ಕೋರ್ಟ್ ಮಧ್ಯಪ್ರವೇಶ ಸಾಧ್ಯವಿಲ್ಲ. ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದು ಸುಪ್ರಿಂ ತಿಳಿಸಿತ್ತು.
ಬುಧವಾರ ಬೆಳಗ್ಗೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಪಡೆದಿರುವ ಚಿತ್ರದ ನಿರ್ಮಾಪಕರು, 'ಮೊದಲ ಹಂತದ ಮತದಾನ ನಡೆಯಲಿರುವ ದಿನದಂತೆ ಅಂದರೆ ಏ.11ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದ್ದರು. ಆದರೆ ಚುನಾವಣಾ ಆಯೋಗ ಬಿಡುಗಡೆಹೆ ಬ್ರೇಕ್ ಹಾಕಿದೆ.